ADVERTISEMENT

ISROಬೇಹುಗಾರಿಕೆ ಪ್ರಕರಣ: ಮಾಲ್ದೀವ್ಸ್ ಮಹಿಳೆ ಸಲುಗೆ ತಿರಸ್ಕರಿಸಿದ್ದೇ ಕಾರಣ: CBI

ಪಿಟಿಐ
Published 11 ಜುಲೈ 2024, 0:09 IST
Last Updated 11 ಜುಲೈ 2024, 0:09 IST
-
-   

ತಿರುವನಂತಪುರ: ಸಲುಗೆ ಬೆಳೆಸುವ ತನ್ನ ಪ್ರಸ್ತಾವವನ್ನು ಮಾಲ್ದೀವ್ಸ್‌ ಮಹಿಳೆ ತಿರಸ್ಕರಿಸಿದ ನಂತರ, ಆಕೆಯನ್ನು ಅಕ್ರಮವಾಗಿ ಬಂಧನದಲ್ಲಿರಿಸಿದ ತನ್ನ ಕ್ರಮವನ್ನು ಸಮರ್ಥಿಸುವುದಕ್ಕಾಗಿ ಪೊಲೀಸ್‌ ಇಲಾಖೆಯ ವಿಶೇಷ ವಿಭಾಗದ ಅಧಿಕಾರಿ ಇಸ್ರೊ ಬೇಹುಗಾರಿಕೆ ಪ್ರಕರಣವನ್ನು ಸೃಷ್ಟಿಸಿದ್ದರು ಎಂದು ಸಿಬಿಐ ಆರೋಪಿಸಿದೆ.

1984ರ ಇಸ್ರೊ ಬೇಹುಗಾರಿಕೆ ಪ್ರಕರಣ ಕುರಿತಂತೆ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಈ ಮಾಹಿತಿ ಇದೆ.

ಈ ಪ್ರಕರಣದಲ್ಲಿ ಇಸ್ರೊ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಹಾಗೂ ಇತರ ಐವರನ್ನು ತಪ್ಪಾಗಿ ಆರೋಪಿಗಳನ್ನಾಗಿ ಮಾಡಲಾಗಿತ್ತು. ಈ ಸಂಬಂಧ ಐವರು ಮಾಜಿ ಪೊಲೀಸ್‌ ಅಧಿಕಾರಿಗಳ ವಿರುದ್ಧ ಸಿಬಿಐ ತಾನು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಆಪಾದನೆ ಮಾಡಿದೆ.

ADVERTISEMENT

ಜೂನ್‌ ಕೊನೆ ವಾರದಲ್ಲಿ ಸಲ್ಲಿಸಲಾಗಿರುವ ಈ ಆರೋಪಪಟ್ಟಿ ಬುಧವಾರ ಬಹಿರಂಗಗೊಂಡಿದೆ.

‘ಆಗ, ವಿಶೇಷ ವಿಭಾಗದ ಅಧಿಕಾರಿಯಾಗಿದ್ದ ಎಸ್‌.ವಿಜಯನ್, ಮಾಲ್ದೀವ್ಸ್‌ ಪ್ರಜೆ ಮರಿಯಮ್ ರಶೀದಾ ಅವರ ದಾಖಲೆಪತ್ರಗಳನ್ನು ಕಸಿದುಕೊಂಡು, ಆಕೆ ಭಾರತ ತೊರೆಯದಂತೆ ತಡೆದಿದ್ದರು’ ಎಂದು ಸಿಬಿಐ ಹೇಳಿದೆ.

‘ಇಸ್ರೊ ವಿಜ್ಞಾನಿ ಡಿ.ಶಶಿಕುಮಾರ್ ಅವರೊಂದಿಗೆ ರಶೀದಾ ಸಂಪರ್ಕದಲ್ಲಿದ್ದ ವಿಷಯವನ್ನು ವಿಜಯನ್‌ ಪತ್ತೆ ಹಚ್ಚಿದ್ದರು. ಇದರ ಆಧಾರದ ಮೇಲೆಯೇ ರಶೀದಾ ಹಾಗೂ ಆಕೆಯ ಸ್ನೇಹಿತರಾದ ಮಾಲ್ದೀವ್ಸ್ ಪ್ರಜೆ ಫೌಜಿಯಾ ಹಸನ್‌ ಮೇಲೆ ನಿಗಾ ಇಟ್ಟಿದರು’ ಎಂದೂ ಸಿಬಿಐ ತಿಳಿಸಿದೆ.

ಅವಧಿ ಮೀರಿ ದೇಶದಲ್ಲಿ ಉಳಿದ ಆರೋಪಕ್ಕೆ ಸಂಬಂಧಿಸಿ, ವಿದೇಶಿಗರ ಕಾಯ್ದೆ ಅಡಿ ರಶೀದಾ ಅವರನ್ನು ಬಂಧಿಸಲಾಗಿತ್ತು. ಬಂಧನ ಅವಧಿ ಮುಗಿಯುತ್ತಿದ್ದ ವೇಳೆಯೇ ವಿಜಯನ್‌ ಸಲ್ಲಿಸಿದ್ದ ವರದಿ ಆಧರಿಸಿ ರಶೀದಾ ಮತ್ತು ಹಸನ್‌ ವಿರುದ್ಧ ಗೋಪ್ಯತಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತನಿಖೆಯನ್ನು ಎಸ್‌ಐಟಿಗೆ ವಹಿಸಲಾಗಿತ್ತು.

ಇದಾದ ನಂತರ, ನಂಬಿ ನಾರಾಯಣನ್‌ ಸೇರಿದಂತೆ ನಾಲ್ವರು ಇಸ್ರೊ ವಿಜ್ಞಾನಿಗಳನ್ನು ಎಸ್‌ಐಟಿ ಬಂಧಿಸಿತ್ತು ಎಂದು ಸಿಬಿಐ, ಆರೋಪಪಟ್ಟಿಯಲ್ಲಿ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.