ADVERTISEMENT

ISRO: PSLV–C62 ಕಾರ್ಯಾಚರಣೆಯ 3ನೇ ಹಂತದಲ್ಲಿ ದೋಷ, ಲಯ ತಪ್ಪಿದ ರಾಕೆಟ್

ಪಿಟಿಐ
Published 12 ಜನವರಿ 2026, 7:14 IST
Last Updated 12 ಜನವರಿ 2026, 7:14 IST
   

ಶ್ರೀಹರಿಕೋಟ: ಭೂ ಸರ್ವೇಕ್ಷಣಾ ಉಪಗ್ರಹ ಹಾಗೂ ಇತರ 14 ಉಪಗ್ರಹಗಳನ್ನು ಹೊತ್ತು ನಭಕ್ಕೆ ಚಿಮ್ಮಿದ ಪಿಎಸ್‌ಎಲ್‌ವಿ–ಸಿ62 ರಾಕೆಟ್‌ ಯೋಜನೆಯ ಕಾರ್ಯಾಚರಣೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್‌ ಸೋಮವಾರ ಹೇಳಿದ್ದಾರೆ.

ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ 44.4 ಮೀಟರ್ ಎತ್ತರದ ರಾಕೆಟ್ ಇಂದು (ಸೋಮವಾರ) ಬೆಳಿಗ್ಗೆ 10.18ಕ್ಕೆ ಯಶಸ್ವಿಯಾಗಿ ಉಡಾವಣೆಗೊಂಡಿತು.

ಇಸ್ರೊ ಅಂಗಸಂಸ್ಥೆಯಾದ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ ನೇತೃತ್ವದಲ್ಲಿ ದೇಶೀಯ ಹಾಗೂ ವಿದೇಶದ 14 ಉಪಗ್ರಹಗಳನ್ನು 17 ನಿಮಿಷಗಳ ಪ್ರಯಾಣದ ನಂತರ, ಸುಮಾರು 511 ಕಿ.ಮೀ ಎತ್ತರದಲ್ಲಿ ಕಕ್ಷಗೆ ಸೇರಿಸುವ ಗುರಿ ಇದರದ್ದಾಗಿತ್ತು.

ADVERTISEMENT

ಇಸ್ರೊ ಮಾಹಿತಿ ಪ್ರಕಾರ, ಮೊದಲೆರಡು ಹಂತಗಳ ಕಾರ್ಯಾಚರಣೆಯು ನಿರೀಕ್ಷಿತವಾಗಿ ಸಾಗಿತು. ಆದರೆ, ಮೂರನೇ ಹಂತದ ವೇಳೆ ಅಡಚಣೆ ಎದುರಾಗಿದೆ.

ಮಿಷನ್‌ ಕಂಟ್ರೋಲ್‌ನಲ್ಲಿ ತಂಡವನ್ನುದ್ದೇಶಿಸಿ ಮಾತನಾಡಿರುವ ನಾರಾಯಣನ್‌, 'ಪಿಎಸ್‌ಎಲ್‌ವಿ ಕಾರ್ಯಾಚರಣೆಯು ನಾಲ್ಕು ಹಂತಗಳನ್ನು ಹೊಂದಿದೆ. ಮೂರನೇ ಹಂತದ ವರೆಗಿನ ಕಾರ್ಯಾಚರಣೆಯು ಯೋಜನೆಯಂತೆಯೇ ಸಾಗಿತು. ಆದರೆ, ಅದಾದ ನಂತರ ಎದುರಾಗಿರುವ ತಾಂತ್ರಿಕ ದೋಷದಿಂದಾಗಿ ಹಾರಾಟವು ನಿಗದಿತ ಮಾರ್ಗದಲ್ಲಿ ಸಾಗುತ್ತಿಲ್ಲ. ಎಲ್ಲ ಮಾಹಿತಿಗಳನ್ನು ವಿಶ್ಲೇಷಿಸುತ್ತಿದ್ದೇವೆ. ಶೀಘ್ರವೇ ಈ ಕುರಿತ ಮಾಹಿತಿ ನೀಡುತ್ತೇವೆ' ಎಂದು ತಿಳಿಸಿದ್ದಾರೆ.

ಇದೇ ವಿಚಾರವಾಗಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಇಸ್ರೊ ಪೋಸ್ಟ್‌ ಹಂಚಿಕೊಂಡಿದೆ. 'ಪಿಎಸ್‌ಎಲ್‌ವಿ–ಸಿ62  ಕಾರ್ಯಾಚರಣೆಯ ಮೂರನೇ ಹಂತದಲ್ಲಿ ವೈಪರೀತ್ಯ ಕಂಡು ಬಂದಿದೆ. ವಿಶ್ಲೇಷಣೆ ಆರಂಭವಾಗಿದೆ' ಎಂದು ಮಾಹಿತಿ ನೀಡಿದೆ.

ಇದು, 2026ರಲ್ಲಿ ಇಸ್ರೊದ ಮೊದಲ ಉಡಾವಣೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.