ನವದೆಹಲಿ: ಫೆಬ್ರುವರಿ 1ರಿಂದ ಚಿತ್ರಮಂದಿರಗಳಲ್ಲಿ ಪೂರ್ಣ ಸೀಟು ಭರ್ತಿ ಮಾಡಲು ಅವಕಾಶ ನೀಡಿರುವುದಾಗಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಭಾನುವಾರ ಪ್ರಕಟಿಸಿದ್ದಾರೆ.
ಚಿತ್ರ ಪ್ರದರ್ಶನ, ಚಿತ್ರಮಂದಿರ ನಿರ್ವಹಣೆಗೆ ಸಂಬಂಧಿಸಿದಂತೆ ಕಾರ್ಯಾಚರಣೆ ವಿಧಾನವನ್ನು(ಎಸ್‌ಒಪಿ) ಪರಿಷ್ಕರಿಸಿ ಬಿಡುಗಡೆ ಮಾಡಲಾಗಿದೆ. ಇದು ಸಿನಿಮಾ ಪ್ರಿಯರಿಗೆ ನೆಚ್ಚಿನ ಸುದ್ದಿಯಾಗಿದೆ ಎಂದು ಜಾವಡೇಕರ್ ಮಾಹಿತಿ ನೀಡಿದ್ದಾರೆ.
ಸೋಮವಾರದಿಂದ ಸಿನಿಮಾ ಥಿಯೇಟರ್‌ಗಳಲ್ಲಿ ಶೇ 100ರಷ್ಟು ಸೀಟುಗಳನ್ನು ಭರ್ತಿ ಮಾಡಬಹುದಾಗಿದೆ. ಆದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿರುವ ಕೋವಿಡ್–19 ನಿಯಮಗಳನ್ನು ಕಡ್ಡಾಯ ಅನುಸರಿಸಬೇಕು ಎಂದಿದ್ದಾರೆ.
ಒಟಿಟಿ ಪ್ಲಾಟ್‌ಫಾರ್ಮ್ ಕಾರ್ಯಕ್ರಮಗಳಿಗೆ ಬರಲಿವೆ ನಿಯಮಾವಳಿಗಳು
ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಗುತ್ತಿರುವ ಕೆಲವು ಸೀರಿಸ್‌ಗಳು, ಧಾರಾವಾಹಿಗಳಲ್ಲಿ ತೋರಿಸಲಾಗುತ್ತಿರುವ ವಿಷಯಗಳ ಬಗ್ಗೆ ಬಹಳಷ್ಟು ದೂರುಗಳು ಬಂದಿವೆ ಎಂದು ಜಾವಡೇಕರ್ ಹೇಳಿದ್ದಾರೆ.
ಒಟಿಟಿ ಪ್ಲಾಟ್‌ಫಾರ್ಮ್‌ಗಳು ಹಾಗೂ ಕೇಬಲ್ ನೆಟ್‌ವರ್ಕ್‌ಗಳಲ್ಲಿ ಪ್ರಸಾರವಾಗುವ ಸಿನಿಮಾಗಳು, ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಅನುಸರಿಸಬೇಕಾದ ನಿಯಮಾವಳಿಗಳನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಡಿಜಿಟಲ್ ನ್ಯೂಸ್ ಹಾಗೂ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳು, ಸೀರಿಯಲ್‌ಗಳು ಕೇಬಲ್ ಟೆವಿವಿಷನ್ ನೆಟವರ್ಕ್ಸ್ (ನಿಯಂತ್ರಣ) ಕಾಯ್ದೆ, ಪ್ರೆಸ್ ಕೌನ್ಸಿಲ್ ಕಾಯ್ದೆ ಅಥವಾ ಸೆನ್ಸರ್ ಮಂಡಳಿಯ ನಿಯಮಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.