ADVERTISEMENT

ತಮಿಳುನಾಡಿನಲ್ಲಿ ಐಟಿ ದಾಳಿ: ಅಘೋಷಿತ ₹ 1,000 ಕೋಟಿಗೂ ಅಧಿಕ ಆದಾಯ ಪತ್ತೆ

ಪಿಟಿಐ
Published 7 ಮಾರ್ಚ್ 2021, 10:50 IST
Last Updated 7 ಮಾರ್ಚ್ 2021, 10:50 IST
ಆದಾಯ ತೆರಿಗೆ ಇಲಾಖೆ
ಆದಾಯ ತೆರಿಗೆ ಇಲಾಖೆ   

ನವದೆಹಲಿ: ತಮಿಳುನಾಡಿನಲ್ಲಿರುವ ದಕ್ಷಿಣ ಭಾರತದ ಪ್ರಮುಖ ಚಿನ್ನ ವ್ಯಾಪಾರಿಗೆ ಸೇರಿದ ಕಚೇರಿ, ಮಳಿಗೆಗಳ ಮೇಲೆ ನಡೆಸಿದ ದಾಳಿ ವೇಳೆ, ಅಘೋಷಿತ ₹ 1,000 ಕೋಟಿಗೂ ಅಧಿಕ ಮೊತ್ತದ ಆದಾಯವನ್ನು ಪತ್ತೆ ಹಚ್ಚಲಾಗಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಈ ದಾಳಿ ವೇಳೆ ಪತ್ತೆಯಾದ ಲೆಕ್ಕಪತ್ರ ಇಲ್ಲದ ₹ 1.2 ಕೋಟಿ ನಗದನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿರುವ ಅಧಿಕಾರಿಗಳು, ವ್ಯಾಪಾರಿಯ ಹೆಸರು ಹಾಗೂ ಇತರ ವಿವರಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.

ಮಾರ್ಚ್ 4ರಂದು ಚೆನ್ನೈ, ಮುಂಬೈ, ಕೊಯಮತ್ತೂರು, ಮದುರೈ, ತಿರುಚಿರಾಪಳ್ಳಿ, ತ್ರಿಶ್ಶೂರ್, ನೆಲ್ಲೂರು, ಜೈಪುರ ಹಾಗೂ ಇಂದೋರ್‌ನ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿತ್ತು.

ADVERTISEMENT

‘ಲೆಕ್ಕಪತ್ರ ಇರದ ನಗದು ವ್ಯವಹಾರ, ಖೊಟ್ಟಿ ಕ್ಯಾಶ್‌ ಕ್ರೆಡಿಟ್‌, ನೋಟು ರದ್ದತಿ ವೇಳೆ ಮಾಡಲಾದ ಠೇವಣಿಗಳು ಸೇರಿದಂತೆ ಲೆಕ್ಕಪತ್ರ ಇಲ್ಲದ ವ್ಯವಹಾರಗಳ ಬಗ್ಗೆ ಸಾಕಷ್ಟು ಸಾಕ್ಷ್ಯಗಳನ್ನು ದಾಳಿ ವೇಳೆ ಸಂಗ್ರಹಿಸಲಾಗಿದೆ’ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಪ್ರಕಟಣೆ ತಿಳಿಸಿದೆ.

‘ಚಿನ್ನದ ವ್ಯಾಪಾರಿ ಖರೀದಿಸಿರುವ ಚಿನ್ನದ ಗಟ್ಟಿಗಳಿಗೆ ಸಂಬಂಧಿಸಿದಂತೆ ಲೆಕ್ಕಪತ್ರ ಇಲ್ಲ. ಆದರೆ, ಹಳೆ ಚಿನ್ನವನ್ನು ಬಳಸಿ, ಆಭರಣಗಳನ್ನು ಮಾಡುವಾಗ ನಷ್ಟವಾಗಿರುವ ಹಾಗೂ ಸಾಲ ಹೊಂದಿರುವ ಬಗ್ಗೆ ಸುಳ್ಳು ಮಾಹಿತಿ ನೀಡಿರುವುದು ಸಹ ಪತ್ತೆಯಾಗಿದೆ’ ಎಂದೂ ಪ್ರಕಟಣೆ ತಿಳಿಸಿದೆ.

ವಿಧಾನಸಭೆ ಚುನಾವಣೆ ಕಣ ನಿಧಾನವಾಗಿ ರಂಗೇರುತ್ತಿರುವ ಈ ಸಂದರ್ಭದಲ್ಲಿ ತಮಿಳುನಾಡಿನ ಪ್ರಮುಖ ಜ್ಯುವೆಲ್ಲರಿ ವ್ಯಾಪಾರಿ ಮೇಲೆ ನಡೆದ ಆದಾಯ ತೆರಿಗೆ ದಾಳಿ ಕುತೂಹಲಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.