ADVERTISEMENT

ಕಪಿಲ್‌ ಸಿಬಲ್‌ ಮಾರ್ಮಿಕ ಟ್ವೀಟ್‌, ಕಾಂಗ್ರೆಸ್‌ ಪಾಳೆಯದಲ್ಲಿ ಮತ್ತೆ ಚರ್ಚೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಆಗಸ್ಟ್ 2020, 12:53 IST
Last Updated 25 ಆಗಸ್ಟ್ 2020, 12:53 IST
ಸೋನಿಯಾ, ರಾಹುಲ್‌
ಸೋನಿಯಾ, ರಾಹುಲ್‌   

ನವದೆಹಲಿ: ಕಾಂಗ್ರೆಸ್‌ ಪಕ್ಷದಲ್ಲಿ ಸೃಷ್ಟಿಯಾಗಿರುವ ನಾಯಕತ್ವ ಬಿಕ್ಕಟ್ಟಿಗೆ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯು(ಸಿಡಬ್ಲ್ಯುಸಿ) ಸಭೆ ನಡೆಸಿದ ಮರು ದಿನವೇ ಹಿರಿಯ ನಾಯಕ ಕಪಿಲ್‌ ಸಿಬಲ್‌ ಅವರ ಮಾರ್ಮಿಕ ಟ್ವೀಟ್‌ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಅವರ ಗೂಡಾರ್ಥದ ಟ್ವೀಟ್‌ ಬಗ್ಗೆ ಕಾಂಗ್ರೆಸ್‌ ಪಾಳೆಯದಲ್ಲಿ ಮತ್ತೆ ಚರ್ಚೆಗಳು ಆರಂಭವಾಗಿವೆ. ಮಂಗಳವಾರ ಕಪಿಲ್‌ ಸಿಬಲ್‌ ಅವರು‘ಇದು ಒಂದು ಹುದ್ದೆಯ ಪ್ರಶ್ನೆಯಲ್ಲ, ಇದು ನನ್ನ ದೇಶಕ್ಕಾಗಿ ಮಹತ್ವದ್ದು’ ಎಂದು ಟ್ವೀಟ್‌ ಮಾಡಿದ್ದಾರೆ.

ಪೂರ್ಣಾವಧಿ ಮತ್ತು ಸಕ್ರಿಯ ಅಧ್ಯಕ್ಷರು ಬೇಕು ಎಂದು ಒತ್ತಾಯಿಸಿ ಪಕ್ಷದ 23 ಹಿರಿಯ ಮುಖಂಡರು ಪತ್ರ ಬರೆದಿರುವುದು ಕಾಂಗ್ರೆಸ್‌ನಲ್ಲಿ ತಳಮಳ ಉಂಟಾಗಿತ್ತು. ಈ ಕಾರಣಕ್ಕಾಗಿಯೇ ಸೋಮವಾರ ಸಿಡಬ್ಲ್ಯುಸಿ ಸಭೆ ನಡೆಸಲಾಗಿತ್ತು. ಸುಮಾರು ಏಳು ತಾಸುಗಳ ಸುದೀರ್ಘ ಸಭೆಯಲ್ಲಿಯೂ ಪೂರ್ಣ ಪರಿಹಾರ ಸಿಕ್ಕಿಲ್ಲ.

ADVERTISEMENT

ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ (ಎಐಸಿಸಿ) ಅಧಿವೇಶನ ನಡೆಯುವವರೆಗೆ ಸೋನಿಯಾ ಗಾಂಧಿ ಅವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಸಿಡಬ್ಲ್ಯುಸಿ ಸದಸ್ಯರು ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳಲಾಯಿತು. ಹಾಗೂ ಪಕ್ಷ ಸಂಘಟನೆಯಲ್ಲಿ ಅಗತ್ಯ ಬದಲಾವಣೆ ತರುವ ಹೊಣೆಯನ್ನೂ ಸೋನಿಯಾ ಅವರಿಗೆ ನೀಡಲಾಗಿದೆ.

ಪಕ್ಷದ 23 ಮುಖಂಡರು ಬರೆದ ಪತ್ರದ ಬಗ್ಗೆ ರಾಹುಲ್‌ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದ ನಿಷ್ಠರು ಸಿಡಬ್ಲ್ಯುಸಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಆಜಾದ್‌ ಹಾಗೂ ಆನಂದ್‌ ಶರ್ಮಾ ಅವರನ್ನು ಕೆಲ ನಾಯಕರು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಈ ಸಭೆಯಲ್ಲಿ ಭಾಗವಹಿಸದ ಕಪಿಲ್‌ ಸಿಬಲ್‌ ಅವರ ಬಗ್ಗೆಯೂ ಅಸಮಾಧಾನ ವ್ಯಕ್ತವಾಯಿತು ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.

ಸಭೆಯ ಬಳಿಕ ಸೋಮವಾರ ರಾತ್ರಿ ಆಜಾದ್‌, ಆನಂದ್‌ ಶರ್ಮಾ ಹಾಗೂ ಕಪಿಲ್‌ ಸಿಬಲ್‌ ಅವರು ರಹಸ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಬೆನ್ನಲೇ ಕಪಿಲ್‌ ಸಿಬಲ್‌ ಅವರು ಮಾರ್ಮಿಕವಾಗಿ ಟ್ವೀಟ್‌ ಮಾಡಿರುವುದು ಮಹತ್ವ ಪಡೆದುಕೊಂಡಿದೆ.

ಸೋಮವಾರ ಸಿಬಲ್‌ ಅವರ ಟ್ವೀಟ್‌ ಕೂಡ ನಾಟಕೀಯ ತಿರುವುಪಡೆದುಕೊಂಡಿತ್ತು. ಪಕ್ಷದ ನಾಯಕತ್ವದಲ್ಲಿ ಸುಧಾರಣೆಯಾಗಬೇಕು ಎಂದುಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದವರ ಕುರಿತು ಮಾತನಾಡಿದ್ದ ರಾಹುಲ್ ಗಾಂಧಿ, ಈ ಪತ್ರವನ್ನು ಬರೆದವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಆದೇಶದ ಮೇರೆಗೆ ಹೀಗೆ ಮಾಡಿದ್ದಾರೆ ಎಂದು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ ಎಂಬ ವರದಿಯ ಆಧಾರದ ಮೇಲೆ ಕಪಿಲ್‌ ಸಿಬಲ್‌ ಅವರು ರಾಹುಲ್‌ ಗಾಂಧಿ ಮೇಲೆ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದರು. ಬಳಿಕ ಸಿಬಲ್‌ ಅವರಿಗೆ ರಾಹುಲ್‌ ಗಾಂಧಿ ಕರೆ ಮಾಡಿ, ನಾನು ಆ ಅರ್ಥದಲ್ಲಿ ಹೇಳಿಲ್ಲ ಎಂದ ಬಳಿಕ ಸಿಬಲ್‌ ಅವರು ಆ ಟ್ವೀಟ್‌ ಅನ್ನು ಅಳಿಸಿ ಹಾಕಿದ್ದರು.

ಗಾಂಧಿ ಕುಟುಂಬದ ನಿಷ್ಠರ ಮಾತುಗಳನ್ನೇ ಸೋನಿಯಾ ಮತ್ತು ರಾಹುಲ್‌ಹೆಚ್ಚಾಗಿ ಕೇಳುತ್ತಾರೆ ಇದರಿಂದ ಪಕ್ಷದ ಸಂಘಟನೆಗೆ ತೊಂದರೆಯಾಗಿದೆ. ಪಕ್ಷದ ಆಯಕಟ್ಟಿನ ಸ್ಥಾನಗಳಲ್ಲಿ ಅಸಮರ್ಥರೇ ತುಂಬಿದ್ದಾರೆ. ಇವರ ನಿಷ್ಠರ ಮಾತಿನ ಮೇರೆಗೆ ನೇಮಕವಾಗಿದ್ದಾರೆ. ಹಾಗೇಪೂರ್ಣ ಪ್ರಮಾಣದ ಸಕ್ರಿಯ ನಾಯಕತ್ವ ಇದ್ದಾಗ ಮಾತ್ರ ಪಕ್ಷ ಸಂಘಟನೆ ಸಾಧ್ಯ, ಅಲ್ಲದೇಬಿಜೆಪಿಯನ್ನು ಎದುರಿಸಲು ಸುಲಭವಾಗಬಹುದು ಎಂಬುದು ಪತ್ರ ಬರೆದವರ ಅಭಿಪ್ರಾಯವಾಗಿದೆ.

ಪಕ್ಷದೊಳಗೆ ವ್ಯಾಪಕ ಸುಧಾರಣೆಗಳು, ಪಕ್ಷದ ಸ್ಥಿತಿ ಮತ್ತು ನಿರ್ದೇಶನಗಳ ಬಗ್ಗೆಯೂ ಪತ್ರ ಬರೆದವರ ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಪಿಲ್‌ ಸಿಬಲ್‌ಒಂದು ಹುದ್ದೆಯ ಪ್ರಶ್ನೆಯಲ್ಲ, ಒಂದು ಪಕ್ಷದ ಅಸ್ತಿತ್ವ ಮತ್ತು ದೇಶದಬಹುತ್ವದ ವಿಚಾರ ಎಂದು ಮಾರ್ಮಿಕವಾಗಿ ಟ್ವೀಟ್‌ ಮಾಡಿದ್ದಾರೆ. ಗಾಂಧಿ ಕುಟುಂಬದ ನಿಷ್ಠರನ್ನು ದೂರ ಇಟ್ಟು ಪಕ್ಷವನ್ನು ಸುಧಾರಿಸಬೇಕು ಎಂಬ ಕಾರ್ಯತಂತ್ರದಹಿನ್ನೆಲೆಯಲ್ಲಿ ಸಿಬಲ್‌ ಟ್ವೀಟ್‌ ಮಾಡಿದ್ದಾರೆಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪತ್ರ ಬರೆದ 23 ಮುಖಂಡರು ಇವರು...
ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಕಪಿಲ್ ಸಿಬಲ್, ಮನೀಶ್ ತಿವಾರಿ, ಶಶಿ ತರೂರ್, ಸಂಸದ ವಿವೇಕ್ ಟಂಖಾ, ಭೂಪಿಂದರ್ ಸಿಂಗ್ ಹೂಡಾ, ರಾಜೇಂದರ್ ಕೌರ್ ಭಟ್ಟಾಲ್, ಎಂ.ವೀರಪ್ಪ ಮೊಯಿಲಿ, ಪೃಥ್ವಿರಾಜ್ ಚವಾಣ್, ಪಿ.ಜೆ ಕುರಿಯನ್, ಅಜಯ್ ಸಿಂಗ್, ರೇಣುಕಾ ಚೌಧರಿ, ಮಿಲಿಂದ್ ದಿಯೋರಾ ಜಿತಿನ್ ಪ್ರಸಾದ್‌, ರಾಜ್ ಬಬ್ಬರ್ , ಅರವಿಂದರ್ ಸಿಂಗ್ ,ಕೌಲ್ ಸಿಂಗ್ ಠಾಕೂರ್, ಅಖಿಲೇಶ್ ಪ್ರಸಾದ್ ಸಿಂಗ್, ಕುಲದೀಪ್ ಶರ್ಮಾ, ಯೋಗಾನಂದ್ ಶಾಸ್ತ್ರಿ, ಸಂದೀಪ್ ದೀಕ್ಷಿತ್ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.