ADVERTISEMENT

ಜೈಪುರ ಸೇರಿ 4 ನಗರಗಳಲ್ಲಿ ಐಟಿ ದಾಳಿ: ಇದು ರಾಜಕೀಯ ಪ್ರೇರಿತ ಎಂದ ಕಾಂಗ್ರೆಸ್‌

ಪಿಟಿಐ
Published 13 ಜುಲೈ 2020, 7:08 IST
Last Updated 13 ಜುಲೈ 2020, 7:08 IST
ಜೈಪುರದಲ್ಲಿ ಕಾಂಗ್ರೆಸ್‌ ಮುಖಂಡ ರಾಜೀವ್‌ ಅರೋರ ಅವರಿಗೆ ಸೇರಿದ ಚಿನ್ನಾಭರಣ ಮಳಿಗೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೋಮವಾರ ಶೋಧ ನಡೆಸಿದರು –ಪಿಟಿಐ ಚಿತ್ರ
ಜೈಪುರದಲ್ಲಿ ಕಾಂಗ್ರೆಸ್‌ ಮುಖಂಡ ರಾಜೀವ್‌ ಅರೋರ ಅವರಿಗೆ ಸೇರಿದ ಚಿನ್ನಾಭರಣ ಮಳಿಗೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೋಮವಾರ ಶೋಧ ನಡೆಸಿದರು –ಪಿಟಿಐ ಚಿತ್ರ   

ನವದೆಹಲಿ: ಆದಾಯ ತೆರಿಗೆ ಇಲಾಖೆಯು ನಾಲ್ಕು ನಗರಗಳ ವಿವಿಧೆಡೆ ಸೋಮವಾರ ಮುಂಜಾನೆ ಶೋಧ ಕಾರ್ಯ ಆರಂಭಿಸಿದೆ. ‘ತೆರಿಗೆ ವಂಚನೆಗೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ಒಂದು ಜಲವಿದ್ಯುತ್‌ ಮೂಲಸೌಲಭ್ಯ ಸಂಸ್ಥೆ ಹಾಗೂ ಅದರ ಜತೆಗೆ ಸಂಬಂಧ ಹೊಂದಿರುವ ಇತರ ಕಂಪನಿಗಳ ಕಚೇರಿಗಳಲ್ಲಿ ಶೋಧ ನಡೆಯುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ, ಜೈಪುರ, ಮುಂಬೈ ಹಾಗೂ ಕೋಟ ನಗರಗಳಲ್ಲಿ ಸೋಮವಾರ ಮುಂಜಾನೆಯಿಂದಲೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಕನಿಷ್ಠ 80 ವಹಿವಾಟುಗಳಿಗೆ ಸಂಬಂಧಿಸಿದಂತೆ ದಾಖಲೆಗಳ ಶೋಧ ನಡೆಸಲಾಗುತ್ತಿದೆ. ಈ ಕಂಪನಿಗಳೊಳಗೆ ಭಾರಿ ಪ್ರಮಾಣದಲ್ಲಿ ಹಣದ ವಾಹಿವಾಟು ನಡೆಯುತ್ತಿದೆ ಎಂಬ ಮಾಹಿತಿಯ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಲವಿದ್ಯುತ್‌ ಸಂಬಂಧಿಸಿದ ಉಪಕರಣಗಳ ವಹಿವಾಟಿನಲ್ಲಿ ತೊಡಗಿರುವ ಸಂಸ್ಥೆಗೆ 2018ರಲ್ಲಿ ರಾಜಸ್ಥಾನ ಸರ್ಕಾರವು ಅಣೆಕಟ್ಟು ನಿರ್ಮಿಸುವ ಗುತ್ತಿಗೆಯನ್ನು ನೀಡಿತ್ತು. ಈ ಸಂಸ್ಥೆಯ ಜತೆ ಸಂಪರ್ಕ ಹೊಂದಿರುವ, ಜೈಪುರದಲ್ಲಿ ದೊಡ್ಡ ಚಿನ್ನಾಭರಣ ಮಳಿಗೆಯನ್ನು ಹೊಂದಿರುವ ವ್ಯಕ್ತಿಯೊಬ್ಬರ ಕಚೇರಿಯಲ್ಲೂ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಕಾಂಗ್ರೆಸ್‌ ಖಂಡನೆ: ಕಾಂಗ್ರೆಸ್‌ ಜತೆಗೆ ಗುರುತಿಸಿಕೊಂಡಿರುವ ಇಬ್ಬರು ನಾಯಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವುದನ್ನು ಕಾಂಗ್ರೆಸ್‌ ಖಂಡಿಸಿದೆ.

‘ಈ ದಾಳಿಯನ್ನು ನಾನು ಖಂಡಿಸುತ್ತೇನೆ. ನಮ್ಮನ್ನು ಬೆದರಿಸುವ ಉದ್ದೇಶದಿಂದ ಈ ದಾಳಿ ನಡೆಸಲಾಗಿವೆ. ಇಡೀ ದೇಶ ಇದನ್ನು ಗಮನಿಸುತ್ತಿದೆ’ ಎಂದು ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಮಹೇಶ್‌ ಜೋಶಿ ಹೇಳಿದ್ದಾರೆ.

ರಾಜಸ್ಥಾನದಲ್ಲಿ ಐಟಿ ಅಧಿಕಾರಿಗಳು ಕಾಂಗ್ರೆಸ್‌ ಮುಖಂಡರಾದ ರಾಜೀವ್‌ ಅರೋರ ಹಾಗೂ ಧರ್ಮೇಂದ್ರ ರಾಠೋಡ್‌ ಅವರಿಗೆ ಸೇರಿದ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.