ADVERTISEMENT

ಜಾರ್ಖಂಡ್‌: ತೆರಿಗೆ ವಂಚನೆ ಆರೋಪ, ಕಾಂಗ್ರೆಸ್‌ ಶಾಸಕರ ಮನೆಗಳಲ್ಲಿ ಐಟಿ ಶೋಧ

ಪಿಟಿಐ
Published 4 ನವೆಂಬರ್ 2022, 19:30 IST
Last Updated 4 ನವೆಂಬರ್ 2022, 19:30 IST
ಆದಾಯ ತೆರಿಗೆ ಇಲಾಖೆ
ಆದಾಯ ತೆರಿಗೆ ಇಲಾಖೆ   

ರಾಂಚಿ/ನವದೆಹಲಿ: ತೆರಿಗೆ ವಂಚನೆ ಆರೋಪದ ಮೇಲೆ ಜಾರ್ಖಂಡ್‌ನ ಕಾಂಗ್ರೆಸ್‌ ಶಾಸಕರಾದ ಕುಮಾರ್‌ ಜೈಮಂಗಲ್‌ ಮತ್ತು ಪ್ರದೀಪ್‌ ಯಾದವ್‌ ಅವರಿಗೆ ಸೇರಿದ ಮನೆ, ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆಯ (ಐ.ಟಿ) ಅಧಿಕಾರಿಗಳು ಶುಕ್ರವಾರ ಶೋಧ ನಡೆಸಿದ್ದಾರೆ.

ರಾಂಚಿ, ಬೆರಮೊ ಮತ್ತು ಪಟ್ನಾದಲ್ಲಿ ಶೋಧಕಾರ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಶೋಧಕಾರ್ಯಕ್ಕೆ ಸಹಕಾರ ನೀಡುತ್ತೇನೆ. ಬಿಜೆಪಿಯ ಒತ್ತಡದ ಪರಿಣಾಮ ಈ ಶೋಧಕಾರ್ಯ ನಡೆಯುತ್ತಿದೆ. ನಾನು ಇದಕ್ಕೆ ಹೆದರುವುದಿಲ್ಲ’ ಎಂದು ಜೈಮಂಗಲ್‌ ಅವರು ಹೇಳಿದ್ದಾರೆ.

ADVERTISEMENT

‘ಜಾರ್ಖಂಡ್‌ನ ಆಡಳಿತಾರೂಢ ಯುಪಿಎ ಸರ್ಕಾರವನ್ನು ಬುಡಮೇಲುಗೊಳಿಸಲು ಯತ್ನಿಸುತ್ತಿದ್ದಾರೆ' ಎಂದು ಆರೋಪಿಸಿ ಜೈಮಂಗಲ್‌ ಅವರು ತಮ್ಮದೇ ಪಕ್ಷದ ಶಾಸಕರಾದ ಇರ್ಫಾನ್‌ ಅನ್ಸಾರಿ, ರಾಜೇಶ್‌ ಕಚ್ಚಪ್‌, ನಮನ್ ಬಿಕ್ಸಲ್ ಕೊಂಗಾರಿ ಅವರ ವಿರುದ್ಧ ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು.

ಈ ಮೂವರು ಶಾಸಕರನ್ನು ಹಣದೊಂದಿಗೆ ಪಶ್ಚಿಮ ಬಂಗಾಳದಲ್ಲಿ ಪೊಲೀಸರು ಬಂಧಿಸಿದ್ದರು.

ಇ.ಡಿ ಶೋಧ (ರಾಂಚಿ, ಕೋಲ್ಕತ್ತ ವರದಿ):ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಜಾರ್ಖಂಡ್‌ ಮತ್ತು ಪಶ್ಚಿಮ ಬಂಗಾಳದ ವಿವಿಧೆಡೆ ಶುಕ್ರವಾರ ಶೋಧ ನಡೆಸಿದ್ದಾರೆ.

ರಾಂಚಿಯ ಎಂಟು ಕಡೆಗಳಲ್ಲಿ ಮತ್ತು ಪಶ್ಚಿಮ ಬಂಗಾಳದ ಮೂರು ಕಡೆ ಶೋಧ ಕಾರ್ಯ ನಡೆದಿದೆ. ಬಂಧಿತ ಉದ್ಯಮಿ ಅಮಿತ್‌ ಅಗರ್‌ವಾಲ್‌ ಅವರಿಗೆ ಸೇರಿದ ಕಚೇರಿಗಳಲ್ಲೂ ಶೋಧ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಾಟರಿ ಅಂಗಡಿಗೆ ಸಿಬಿಐ ಅಧಿಕಾರಿಗಳ ಭೇಟಿ (ಬೋಲ್ಪುರ್ ವರದಿ):ಜೈಲಿನಲ್ಲಿರುವ ಟಿಎಂಸಿ ಮುಖಂಡ ಅನುಬ್ರತಾ ಮೊಂಡಲ್‌ ಅವರಿಗೆ ₹1ಕೋಟಿ ಬಹುಮಾನ ಲಭಿಸಿರುವ ಪಶ್ಚಿಮ ಬಂಗಾಳದ ಬೀರ್‌ಭೂಮ್‌ ಜಿಲ್ಲೆಯಲ್ಲಿರುವ ಲಾಟರಿ ಅಂಗಡಿಗೆ ಸಿಬಿಐ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

ಜಾನುವಾರು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಮೊಂಡಲ್‌ ಅವರನ್ನು ಆಗಸ್ಟ್‌ನಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.