ADVERTISEMENT

ವಿಮಾನದಲ್ಲಿ ಅನುಚಿತ ವರ್ತನೆ ತೋರಿದ ಇಟಲಿ ಮಹಿಳೆ: ಬಂಧನ

ಪಿಟಿಐ
Published 31 ಜನವರಿ 2023, 14:40 IST
Last Updated 31 ಜನವರಿ 2023, 14:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಅಬು ಧಾಬಿಯಿಂದ ಮುಂಬೈಗೆ ಬಂದಿಳಿದ ವಿಸ್ತಾರ ಸಂಸ್ಥೆಯ ವಿಮಾನದಲ್ಲಿದ್ದ ಇಟಲಿ ಮೂಲದ ಮಹಿಳಾ ಪ್ರಯಾಣಿಕರೊಬ್ಬರು ವಿಮಾನ ಸಿಬ್ಬಂದಿಯೊಬ್ಬರಿಗೆ ಗುದ್ದಿ, ಮತ್ತೊಬ್ಬ ಸಿಬ್ಬಂದಿ ಮೇಲೆ ಉಗುಳಿದ್ದಾರೆ ಎನ್ನಲಾದ ಘಟನೆಯು ಸೋಮವಾರ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ವಿಮಾನವು ಮುಂಬೈನಲ್ಲಿ ನಿಲುಗಡೆಯಾದ ವೇಳೆ ಈ ಘಟನೆ ನಡೆದಿದೆ. 45 ವರ್ಷ ವಯಸ್ಸಿನ ಮಹಿಳೆಯು ಎಕನಾಮಿ ಕ್ಲಾಸ್‌ಗೆ ಟಿಕೆಟ್‌ ಪಡೆದಿದ್ದರು. ಆದರೂ ಅವರು ಬ್ಯುಸಿನೆಸ್‌ ಕ್ಲಾಸ್‌ಗೆ ಪ್ರವೇಶಿಸುತ್ತಿದ್ದಾಗ ಸಿಬ್ಬಂದಿ ಅವರನ್ನು ತಡೆದರು. ಇದರಿಂದ ಕೋಪಗೊಂಡ ಮಹಿಳೆ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಮಹಿಳೆಯನ್ನು ಸಹಾರ್‌ ಪೊಲೀಸರಿಗೆ ಒಪ್ಪಿಸಲಾಯಿತು. ಅವರು ಆಕೆಯನ್ನು ಬಂಧಿಸಿದ್ದಾರೆ. ಪ್ರಮಾಣೀಕೃತ ಕಾರ್ಯಾಚರಣೆ ವಿಧಾನದ (ಎಸ್‌ಒಪಿ) ಅನುಸಾರ ಸಂಬಂಧಪಟ್ಟ ಅಧಿಕಾರಿಗಳಿಗೆ ಘಟನೆಯ ವರದಿ ನೀಡಲಾಗಿದೆ ಎಂದು ವಿಸ್ತಾರ ಸಂಸ್ಥೆಯ ಪ್ರಕಟಣೆಯಲ್ಲಿ ಹೇಳಲಾಗಿದೆ.

ಮಹಿಳೆಯನ್ನು ಪಾವೊಲಾ ಪೆರುಶ್ಶಿಯೊ ಎಂದು ಗುರುತಿಸಲಾಗಿದೆ. ಭಾರತೀಯ ದಂಡ ಸಂಹಿತೆ ಎರಡು ಸೆಕ್ಷನ್‌ಗಳು ಮತ್ತು ವಿಮಾನಯಾನ ಕಾಯ್ದೆಯ ಅಡಿ ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಆಕೆಯನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಪೊಲೀಸರು ತಿಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.