ADVERTISEMENT

'ಐಟಂ' ಹೇಳಿಕೆ ನೀಡಿದ್ದ ಕಮಲ್‌ ನಾಥ್‌ಗೆ ಸಲಹೆ ನೀಡಿದ ಚುನಾವಣಾ ಆಯೋಗ

ಪಿಟಿಐ
Published 27 ಅಕ್ಟೋಬರ್ 2020, 5:37 IST
Last Updated 27 ಅಕ್ಟೋಬರ್ 2020, 5:37 IST
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್   

ನವದೆಹಲಿ: ಬಿಜೆಪಿ ಮಹಿಳಾ ಅಭ್ಯರ್ಥಿಯ ವಿರುದ್ಧದ 'ಐಟಂ' ಹೇಳಿಕೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ಚುನಾವಣಾ ಆಯೋಗವು ಸೂಚನೆ ನೀಡಿದ್ದು,ಮಾದರಿ ನೀತಿ ಸಂಹಿತೆಯ ಅವಧಿಯಲ್ಲಿ ಸಾರ್ವಜನಿಕವಾಗಿ ಇಂತಹ ಪದಗಳನ್ನು ಬಳಸದಂತೆ ಕಾಂಗ್ರೆಸ್ ನಾಯಕನಿಗೆ ಸಲಹೆ ಮಾಡಿದೆ.

ಬಿಜೆಪಿ ಸಚಿವೆ ಇಮಾರ್ತಿ ದೇವಿ ವಿರುದ್ಧ 'ಐಟಂ' ಹೇಳಿಕೆ ನೀಡುವ ಮೂಲಕ ಕಮಲ್ ನಾಥ್ ಅವರು ರಾಜ್ಯದಲ್ಲಿ ಜಾರಿಯಲ್ಲಿದ್ದ ಮಾದರಿ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿತ್ತು.

ಮಧ್ಯಪ್ರದೇಶದ 28 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 3 ರಂದು ಉಪಚುನಾವಣೆ ನಡೆಯಲಿದೆ.

ADVERTISEMENT

ಚುನಾವಣಾ ರಾಲಿಯಲ್ಲಿ 'ತಮ್ಮ ಪಕ್ಷದ ಅಭ್ಯರ್ಥಿ ತುಂಬ ಸರಳ ಅವರಂತೆ (ಇಮಾರ್ತಿ ದೇವಿ) ಐಟಂ ಅಲ್ಲ' ಎಂದು ಬಿಜೆಪಿ ಅಭ್ಯರ್ಥಿ ಇಮಾರ್ತಿ ದೇವಿ ಅವರನ್ನು ಕಮಲ್ ನಾಥ್ ಅವರು ಟೀಕಿಸಿದ್ದರು. ಇದಕ್ಕೆ ಆಡಳಿತ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ರಾಜ್ಯ ಬಿಜೆಪಿಯ ದೂರು ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಉಲ್ಲೇಖದ ನಂತರ ಚುನಾವಣಾ ಆಯೋಗವು ಕಮಲ್ ನಾಥ್ ಅವರಿಗೆ ನೊಟೀಸ್ ಜಾರಿ ಮಾಡಿತ್ತು. ಕಾಂಗ್ರೆಸ್ ಮುಖಂಡರ ವಿರುದ್ಧ ಆಯೋಗ ಸೋಮವಾರ ಆದೇಶ ಹೊರಡಿಸಿದೆ.

ಆಯೋಗವು ಈ ಮೂಲಕ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ, ಮಾದರಿ ನೀತಿ ಸಂಹಿತೆಯ ಅವಧಿಯಲ್ಲಿ ಸಾರ್ವಜನಿಕವಾಗಿ ಮಾತನಾಡುವಾಗ ಅಂತಹ ಯಾವುದೇ ಪದ ಅಥವಾ ಹೇಳಿಕೆಯನ್ನು ಬಳಸಬಾರದು ಎಂದು ಸಲಹೆ ನೀಡುತ್ತದೆ. ಕಮಲ್ ನಾಥ್ ಅವರು ಒಬ್ಬ ಮಹಿಳೆಗಾಗಿ 'ಐಟಂ' ಎಂಬ ಪದವನ್ನು ಬಳಸಿದ್ದಾರೆ ಮತ್ತು ಇದು ಮಾದರಿ ನೀತಿ ಸಂಹಿತೆಗೆ ಸಂಬಂಧಿಸಿದಂತೆ ಆಯೋಗ ನೀಡಿರುವ ಸಲಹೆಯ ಉಲ್ಲಂಘನೆ ಎಂದು ಆದೇಶದಲ್ಲಿ ಹೇಳಲಾಗಿದೆ.

ನೊಟೀಸ್‌ಗೆ ಪ್ರತಿಕ್ರಿಯಿಸಿದ್ದ ಕಮಲ್ ನಾಥ್, 'ನಾನು ಮತ್ತು ನಮ್ಮ ಪಕ್ಷಕ್ಕೆ ಮಹಿಳೆಯ ಗೌರವ ಮತ್ತು ಘನತೆಯನ್ನು ಎತ್ತಿಹಿಡಿಯುವುದು ಅತ್ಯುನ್ನತವಾಗಿದೆ'. ಈ ಸಂದರ್ಭದಲ್ಲಿ, ಮಹಿಳೆಯನ್ನು ಅವಮಾನಿಸಲು ಅಥವಾ ಅಗೌರವಿಸಲು ಯಾವುದೇ ಪೂರ್ವಭಾವಿ ಸಿದ್ಧತೆ ಇರಲಿಲ್ಲ ಎಂದು ಹೇಳಿದ್ದರು.

ಈಮಧ್ಯೆ, ಕಾಂಗ್ರೆಸ್ ಮುಖಂಡರಾದ ದಿಗ್ವಿಜಯ್ ಸಿಂಗ್ ಮತ್ತು ಕಮಲ್ ನಾಥ್ ವಿರುದ್ಧ 'ಚುನ್ನು-ಮುನ್ನು' ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ನಾಯಕ ಕೈಲಾಶ್ ವಿಜಯ್ ವರ್ಗೀಯಾ ಅವರಿಗೆ ಸೋಮವಾರ ಚುನಾವಣಾ ಆಯೋಗ ನೊಟೀಸ್ ನೀಡಿದ್ದು, ಮುಂದಿನ 48 ಗಂಟೆಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಳಿದೆ.

ಇಬ್ಬರ ವಿರುದ್ಧ ಅಕ್ಟೋಬರ್ 14 ರಂದು ನಡೆದ ಚುನಾವಣಾ ರಾಲಿಯಲ್ಲಿ ಇಂದೋರ್‌ನ ಸಾನ್‌ವೆರ್‌ನಲ್ಲಿ ನೀಡಿದ ಹೇಳಿಕೆಯು ಮಾದರಿ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು ನೊಟೀಸ್‌ನಲ್ಲಿ ತಿಳಿಸಲಾಗಿದೆ. ಮಧ್ಯಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿಯಿಂದ ಪಡೆದ ವರದಿ ಆಧರಿಸಿ ನೊಟೀಸ್ ನೀಡಲಾಗಿದೆ.

'ಈ ಸೂಚನೆ ಬಂದ 48 ಗಂಟೆಗಳ ಒಳಗೆ ಮೇಲಿನ ಹೇಳಿಕೆಯನ್ನು ನೀಡುವಲ್ಲಿ ನಿಮ್ಮ ನಿಲುವನ್ನು ವಿವರಿಸಲು ಆಯೋಗವು ನಿಮಗೆ ಅವಕಾಶ ನೀಡುತ್ತದೆ. ಅದು ವಿಫಲವಾದರೆ ಯಾವುದೇ ಸೂಚನೆ ನೀಡದೆಯೇ ಚುನಾವಣಾ ಆಯೋಗ ನಿರ್ಧಾರ ತೆಗೆದುಕೊಳ್ಳುತ್ತದೆ' ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.