ADVERTISEMENT

ಭದ್ರತಾ ಲೋಪ | ಸಂಸದ ಪ್ರತಾಪ ಸಿಂಹ, ಕೇಂದ್ರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

ಪಿಟಿಐ
Published 14 ಡಿಸೆಂಬರ್ 2023, 12:31 IST
Last Updated 14 ಡಿಸೆಂಬರ್ 2023, 12:31 IST
<div class="paragraphs"><p>ಸಂಸತ್ತಿನಲ್ಲಿ ಭದ್ರತಾ ಲೋಪ</p></div>

ಸಂಸತ್ತಿನಲ್ಲಿ ಭದ್ರತಾ ಲೋಪ

   

ನವದೆಹಲಿ: ಸಂಸತ್ತಿನಲ್ಲಿ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಪ್ರತಾಪ ಸಿಂಹ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಭಾರತೀಯ ಯುವ ಕಾಂಗ್ರೆಸ್‌ (ಐವೈಸಿ), ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು (ಗುರುವಾರ) ಪ್ರತಿಭಟನೆ ನಡೆಸಿತು.

ಯುವ ಕಾಂಗ್ರೆಸ್‌ ಕಚೇರಿಯ ಹಿಂಭಾಗದ ರಾಜೇಂದ್ರ ಪ್ರಸಾದ್‌ ರಸ್ತೆಯಲ್ಲಿ ಜಮಾಯಿಸಿದ ನೂರಾರು ಐವೈಸಿ ಕಾರ್ಯಕರ್ತರು, ಬ್ಯಾನರ್‌ಗಳನ್ನು ಹಿಡಿದು ಪ್ರತಾಪ ಸಿಂಹ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನೆ ನಡೆಸಿದರು.

ADVERTISEMENT

‘ನಿನ್ನೆ ಸಂಸತ್ತಿನಲ್ಲಿ ನಡೆದಿರುವುದು ತುಂಬಾ ಗಂಭೀರವಾದ ವಿಷಯವಾಗಿದೆ. ಆದರೆ, ಕೇಂದ್ರ ಸರ್ಕಾರ ಘಟನೆಯ ಬಗ್ಗೆ ತಲೆಕೆಡಿಸಿಕೊಂಡಂತೆ ತೋರುತ್ತಿಲ್ಲ. ಈ ವಿಷಯ ಸಂಸತ್ತಿನ ಭದ್ರತೆಯ ಪ್ರಶ್ನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರು ಈ ಕುರಿತು ಹೇಳಿಕೆ ನೀಡಬೇಕು. ಈ ಲೋಪಕ್ಕೆ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂಬುದನ್ನು ನಮಗೆ ತಿಳಿಸಬೇಕು ಎಂದು ಐವೈಸಿ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್‌ ಬಿ. ವಿ ಒತ್ತಾಯಿಸಿದರು.

2001ರಲ್ಲಿ ಸಂಸತ್ತಿನ ಮೇಲೆ ಭಯೋತ್ಪಾದಕ ದಾಳಿ ನಡೆದ ದಿನವಾದ ಡಿಸೆಂಬರ್ 13ರಂದೇ ಭದ್ರತಾ ಲೋಪಕ್ಕೆ ಸಂಸತ್‌ ಸಾಕ್ಷಿಯಾಯಿತು. ಶೂನ್ಯ ವೇಳೆಯಲ್ಲಿ ವೀಕ್ಷಕರ ಗ್ಯಾಲರಿಯಲ್ಲಿದ್ದ ಇಬ್ಬರು ಅಪರಿಚಿತರು ಸದನದೊಳಗೆ ಜಿಗಿದು, ಹಳದಿ ಬಣ್ಣದ ಹೊಗೆಯನ್ನು ಸಿಂಪಡಿಸಿ ‘ಸರ್ವಾಧಿಕಾರ ನಡೆಯುವುದಿಲ್ಲ’ ಎಂದು ಘೋಷಣೆಯನ್ನೂ ಕೂಗಿದ್ದರು.

ಶೋಭಾ ಒತ್ತಾಯ: ಗುರುವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ‘ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆ ನೀಡಬೇಕು’ ಎಂದು ಒತ್ತಾಯಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.