ರ್‍ಯಾಲಿಯಲ್ಲಿ ಭಾಗಿಯಾಗಿದ್ದ ಜಗನ್ ಮೋಹನ್
ಬೆಂಗಳೂರು: ಆಂಧ್ರಪ್ರದೇಶದ ಗುಂಟೂರು ನಗರದ ಹೊರವಲಯದ ಎಟುಕೂರು ಬಳಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಅವರಿದ್ದ ವಾಹನಕ್ಕೆ ಸಿಲುಕಿ ಪಕ್ಷದ ಕಾರ್ಯಕರ್ತ ಚೀಲಿ ಸಿಂಗಯ್ಯ ಎನ್ನುವವರು ಮೃತಪಟ್ಟಿದ್ದಾರೆ.
ಜೂನ್ 18ರಂದು ಈ ಘಟನೆ ನಡೆದಿದ್ದು, ಈ ಕುರಿತು ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿವೆ. ಆರಂಭದಲ್ಲಿ ರೆಡ್ಡಿ ಅವರ ಅನಧಿಕೃತ ಬೆಂಗಾವಲು ವಾಹನಕ್ಕೆ ಸಿಕ್ಕಿ ಮೃತಪಟ್ಟಿದ್ದಾರೆ ಎನ್ನಲಾಗಿತ್ತು.
ಈ ಹಿಂದೆ ಮೃತಪಟ್ಟಿದ್ದ ಕಾರ್ಯಕರ್ತನ ಕುಟುಂಬದ ಭೇಟಿಗೆ ಜಗನ್‌ಮೋಹನ್ ರೆಡ್ಡಿ ಅವರು ಸತ್ತೇನಪಲ್ಲಿಗೆ ತೆರಳುವಾಗ ಈ ಘಟನೆ ನಡೆದಿದೆ. ಗ್ರಾಮದಲ್ಲಿ ರ‍್ಯಾಲಿ ಆಯೋಜಿಸಿದ್ದು, ಪೊಲೀಸರು 100 ಬೆಂಬಲಿಗರು ಸೇರಲು ಹಾಗೂ ಮೂರು ವಾಹನಗಳ ಬಳಕೆಗೆ ಅನುಮತಿ ನೀಡಿದ್ದರು.
ಆದರೆ, ಅಧಿಕ ಸಂಖ್ಯೆಯಲ್ಲಿ ಬೆಂಬಲಿಗರು ಸೇರಿದ್ದರು. ವಾಹನದಲ್ಲಿದ್ದ ಜಗನ್ ಅವರಿಗೆ ಪುಷ್ಪಗುಚ್ಛ ನೀಡಲು ನೂಕುನುಗ್ಗಲು ದಾಟಿ ಸಿಂಗಯ್ಯ ಹೋಗಲು ಯತ್ನಿಸುವಾಗ ಅವಘಡ ನಡೆದಿದೆ ಎನ್ನಲಾಗಿದೆ.
ಸಿಂಗಯ್ಯ ವಾಹನದಡಿ ಸಿಲುಕಿದಾಗ ಇತರರು ಕೂಗಿಕೊಂಡರು ಚಾಲಕ ವಾಹನ ನಿಲ್ಲಿಸಲಿಲ್ಲ. ಆಸ್ಪತ್ರೆಗೆ ಕರೆದೊಯ್ಯುವಾಗ ಆತ ಮೃತಪಟ್ಟ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.