ADVERTISEMENT

ಪುರಿ | ‘ಬಹುದಾ’ ರಥಯಾತ್ರೆ ಸಂಪನ್ನ: ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಭಕ್ತರು ಭಾಗಿ

ಉ.ಮ.ಮಹೇಶ್
Published 6 ಜುಲೈ 2025, 0:04 IST
Last Updated 6 ಜುಲೈ 2025, 0:04 IST
<div class="paragraphs"><p>ಪುರಿಯಲ್ಲಿ ಶನಿವಾರ ಜರುಗಿದ ಜಗನ್ನಾಥ ಸ್ವಾಮಿ ಮೂರ್ತಿಯಿದ್ದ ಬಹುದಾ ರಥಯಾತ್ರೆಗೆ&nbsp; ಅಸಂಖ್ಯಾತ ಭಕ್ತರು ಸಾಕ್ಷಿಯಾದರು. </p></div>

ಪುರಿಯಲ್ಲಿ ಶನಿವಾರ ಜರುಗಿದ ಜಗನ್ನಾಥ ಸ್ವಾಮಿ ಮೂರ್ತಿಯಿದ್ದ ಬಹುದಾ ರಥಯಾತ್ರೆಗೆ  ಅಸಂಖ್ಯಾತ ಭಕ್ತರು ಸಾಕ್ಷಿಯಾದರು.

   

ಪುರಿ (ಒಡಿಶಾ): ಧಾರ್ಮಿಕ ಯಾತ್ರಾಸ್ಥಳ ಪುರಿಯಲ್ಲಿ 9 ದಿನ‌ ಅಸಂಖ್ಯ ಭಕ್ತರನ್ನು ನಿತ್ಯ ಸೂಜಿಗಲ್ಲಿನಂತೆ ಸೆಳೆದಿದ್ದ ಪುರಿ ಜಗನ್ನಾಥ ದೇವರ ‘ಬಹುದಾ’ ರಥಯಾತ್ರೆ ಶನಿವಾರ ಅದ್ದೂರಿಯಾಗಿ ಸಂಪನ್ನಗೊಂಡಿತು.

ಜಗನ್ನಾಥ, ಸುಭದ್ರಾ, ಬಲಭದ್ರ ಅವರ ಮೂರ್ತಿಗಳಿದ್ದ  ಅಲಂಕೃತ ರಥಗಳಾದ ನಂದಿಘೋಷ, ದರ್ಪದಳನ ಮತ್ತು ತಳಧ್ವಜ ರಥಬೀದಿಯಲ್ಲಿ ಸಾಗಿ ರಾತ್ರಿ 8 ಗಂಟೆ ಸುಮಾರಿಗೆ ಜಗನ್ನಾಥ ಮಂದಿರವನ್ನು ತಲುಪಿದವು.

ADVERTISEMENT

ಭಾನುವಾರ ಈ ಮೂರೂ ಮೂರ್ತಿಗಳಿಗೆ ಸಾಂಪ್ರದಾಯಿಕ ಚಿನ್ನಾಭರಣ ಅಲಂಕಾರ ‘ಸೋನಾ ವೇಷ’ ಮತ್ತು ಮೂಲಸ್ಥಾನದಲ್ಲಿ ಮೂರ್ತಿಗಳ ಪ್ರತಿಷ್ಠಾಪನೆಯ ಮೂಲಕ ಈ ವರ್ಷದ ಹೆಸರಾಂತ ರಥಯಾತ್ರೆಗೆ ತೆರೆಬೀಳಲಿದೆ.

ಸುಮಾರು 200 ಅಡಿ ಅಗಲದ ರಸ್ತೆಯಲ್ಲಿ ಗುಂಡೀಚಾ ದೇವಸ್ಥಾನದಿಂದ ಮಂದಿರ ತಲುಪುವವರೆಗೂ 3.7 ಕಿ.ಮೀ ಕ್ರಮಿಸಿದ ಈ ರಥಯಾತ್ರೆಗೆ, ರಸ್ತೆಯುದ್ದಕ್ಕೂ ಕಿಕ್ಕಿರಿದು ಸೇರಿದ್ದ ಲಕ್ಷಾಂತರ ಜನರು ಸಾಕ್ಷಿಯಾದರು. ಹಲವರು ರಥಕ್ಕೆ ಕಟ್ಟಲಾಗಿದ್ದ ಹಗ್ಗ ಹಿಡಿದು ಎಳೆದು ಸಾರ್ಥಕ ಭಾವವನ್ನು ಸಂಭ್ರಮಿಸಿದರು. 

‘ಜಗನ್ನಾಥ ಸ್ವಾಮಿ ನಯನ ಪಥಧಾಮಿ ಭವತುಮೆ..’  ‘ಜೈ ಜಗನ್ನಾಥ, ಜೈ ಸುಭದ್ರಾ, ಜೈ ಬಲದೇವ..’, ಬೋಲೊ ಜೈ ಜಗನ್ನಾಥ..' ಘೋಷಣೆಗಳು ಲಯಬದ್ಧ ಕರತಾಡನದ ಜೊತೆಗೆ ಮಾರ್ಧನಿಸಿತು.

ಕಾಲಿಡಲೂ ಜಾಗವಿಲ್ಲದಂತೆ ಕಿಕ್ಕಿರಿದು ಸೇರಿದ್ದ ಜನರ ನಡುವೆ ಹಾದು ರಥಗಳು ನಿಗದಿತ ಸ್ಥಾನ ತಲುಪುತ್ತಿದ್ದಂತೆ ಜಿಲ್ಲಾಡಳಿತ, ಅಧಿಕಾರಿಗಳು ನಿರಾಳರಾದರು.

ಆಷಾಢದ ಶುಕ್ಲ ಪಕ್ಷ ದ್ವಿತೀಯ ನಿಮಿತ್ತ ರಥೋತ್ಸವ ಆರಂಭವಾಗಿದ್ದ ಜೂನ್ 27ರಂದು ವಿಪರೀತ ಸೆಕೆ, ದಟ್ಟಣೆಯಿಂದ 625 ಮಂದಿ ಅಸ್ವಸ್ಥಗೊಂಡಿದ್ದರು. ನಂತರ ಎರಡೇ ದಿನದಲ್ಲಿ ಗುಂಡೀಚಾ ಮಂದಿರದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮೂವರು ಅಸುನೀಗಿದ್ದರು.

ಇದರಿಂದ ಎಚ್ಚೆತ್ತಿದ್ದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮುಂಜಾಗ್ರತೆ ವಹಿಸಿದ್ದು, ಭದ್ರತೆ ಬಲಪಡಿಸಿತ್ತು. ಜೊತೆಗೆ, ಅಲ್ಲಲ್ಲಿ ಭಕ್ತಸಮೂಹದ ಮೇಲೆ ನೀರು ಸಿಂಪಡಿಸಲು ವ್ಯವಸ್ಥೆ ಮಾಡಲಾಗಿತ್ತು. ಆದರೂ, ನಿಯತ್ರಣ ಮೀರಿದ ಜನಸಂದಣಿಯಿತ್ತು. ಆಗಾಗ್ಗೆ ಸುರಿದ ತುಂತುರು ಮಳೆಯೂ ಜನರನ್ನು ತಣ್ಣಗಿಡಲು ನೆರವಾಯಿತು.

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತರು ಬಂದಿದ್ದರು.

ಪುರಿಯಲ್ಲಿ ಶನಿವಾರ ಜರುಗಿದ ಜಗನ್ನಾಥ ಸ್ವಾಮಿ ಮೂರ್ತಿಯಿದ್ದ ಬಹುದಾ ರಥಯಾತ್ರೆಗೆ  ಅಸಂಖ್ಯಾತ ಭಕ್ತರು ಸಾಕ್ಷಿಯಾದರು.

ಉತ್ಸವದ ಕೊನೆಯ ದಿನ ಮೂರು ದೇವರ ಮೂರ್ತಿಗಳನ್ನು ಮರಳಿ ಸ್ವಸ್ಥಾನ ಅಂದರೆ ದ್ವಾರಕೆಗೆ ಕರೆತರಲಾಗುತ್ತದೆ. ಇದಕ್ಕೆ ಸಾಕ್ಷಿಯಾಗುವ ಎಲ್ಲರನ್ನು ವೃಂದಾವನ ವಾಸಿಗಳು ಎಂದೇ ನಾವು ಭಾವಿಸುತ್ತೇವೆ
ಮೊಹೋತ್ಸಾಹ ಚೈತನ್ಯ ದಾಸ, ಇಸ್ಕಾನ್ ಬೆಂಗಳೂರು

20 ಎಕರೆ  ವಿಸ್ತೀರ್ಣದಲ್ಲಿ ಇಸ್ಕಾನ್ ಸಂಕೀರ್ಣ

ನಿರ್ಮಿಸಲು ಕ್ರಮ ಪುರಿಯಲ್ಲಿ ಜಗನ್ನಾಥ ರಥಯಾತ್ರೆ ನಡೆಯುವ ಅವಧಿಯಲ್ಲಿ ಕರ್ನಾಟಕ ಮೂಲದ ಪ್ರವಾಸಿಗರಿಗೆ ಸುಗಮ ದರ್ಶನ ವಾಸ್ತವ್ಯ ಸೇರಿದಂತೆ ಅಗತ್ಯ ಸೇವೆ ಒದಗಿಸಲು ಶಾಶ್ವತ ವ್ಯವಸ್ಥೆಯ ನಿರ್ಮಾಣಕ್ಕೆ ಇಸ್ಕಾನ್ ಚಾಲನೆ ನೀಡಿದೆ.  ಪುರಿ ಹೊರವಲಯದಲ್ಲಿ 20 ಎಕರೆ ಜಮೀನು ಖರೀದಿಸಿದ್ದು ಸ್ಥಳೀಯ ಭಕ್ತರಿರುವ ಟ್ರಸ್ಟ್ ಸಹಯೋಗದಲ್ಲಿ ಈ ಯೋಜನೆ ಕಾರ್ಯಗತಗೊಳಿಸಲಾಗುವುದು ಎಂದು ಬೆಂಗಳೂರು ಇಸ್ಕಾನ್‌ನ ಉಪಾಧ್ಯಕ್ಷ ನವೀನ ನೀರದ ದಾಸ ತಿಳಿಸಿದರು. ದೇಗುಲ ವಾಸ್ತವ್ಯ ಕೊಠಡಿಗಳು ಅಕ್ಷಯಪಾತ್ರ ಅಡುಗೆ ಕೋಣೆ ಬಹುಜನ ವಾಸ್ತವ್ಯ ಕೊಠಡಿ (ಡಾರ್ಮಿಟರಿ) ಭಜನಾ ಮಂದಿರ ಗ್ರಂಥಾಲಯ ಆಯುರ್ವೇದ ಕೇಂದ್ರ ಹಾಗೂ ಮಾಹಿತಿ ಕೇಂದ್ರಗಳನ್ನು ಉದ್ದೇಶಿತ ಸಂಕೀರ್ಣವು ಹೊಂದಿರಲಿದೆ ಎಂದು ಇಸ್ಕಾನ್ ಅಂತರರಾಷ್ಟ್ರೀಯ ಮಾಧ್ಯಮ ವಿಭಾಗದ ಸಂಯೋಜಕರೂ ಆಗಿರುವ ಅವರು  ವಿವರಿಸಿದರು. ಬೆಂಗಳೂರು ಇಸ್ಕಾನ್‌ನ ಮಾನ್ಯತೆ ಹೊಂದಿರುವ ಸ್ಥಳೀಯ ಮುಖಂಡರ ಟ್ರಸ್ಟ್ ಈ ಸಂಕೀರ್ಣವನ್ನು ನಿರ್ವಹಿಸಲಿದೆ. ಸ್ಥಳೀಯ ಪರಂಪರೆ ಸಂಸ್ಕೃತಿ ಮತ್ತು ವಾಸ್ತುಶಿಲ್ಪವನ್ನು ಬಿಂಬಿಸುವಂತೆ ಸಂಕೀರ್ಣ ನಿರ್ಮಾಣ ಆಗಲಿದೆ. ಈ ಸಂಕೀರ್ಣದಲ್ಲಿ ಕೃಷ್ಣ ದೇಗುಲದ ಜೊತೆಗೆ ಜಗನ್ನಾಥ ಸುಭದ್ರಾ ಮತ್ತು ಬಲರಾಮರ ಆಲಯವು ಇರಲಿದೆ ಎಂದರು. ಆನ್‌ಲೈನ್‌ ಮೂಲಕ ನಡೆದ ಈ ಸಂವಾದದ ವೇಳೆ ಇಸ್ಕಾನ್ ಬೆಂಗಳೂರು ಮಾಧ್ಯಮ ವಿಭಾಗದ ಉಸ್ತುವಾರಿ ಮೊಹೋತ್ಸಾಹ ಚೈತನ್ಯ ದಾಸ ಮತ್ತು ವಿಮಲ ಕೃಷ್ಣದಾಸ ಅವರು ಪುರಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.