ADVERTISEMENT

ರಾಜ್ಯಸಭೆ | ರಾಹುಲ್ ‘ಚೀನಾ ಗುರು’ ಎಂದು ಟೀಕಿಸಿದ ಸಚಿವ ಜೈಶಂಕರ್

ಪಿಟಿಐ
Published 30 ಜುಲೈ 2025, 11:44 IST
Last Updated 30 ಜುಲೈ 2025, 11:44 IST
<div class="paragraphs"><p>ಎಸ್. ಜೈಶಂಕರ್ ಮತ್ತು ರಾಹುಲ್ ಗಾಂಧಿ</p></div>

ಎಸ್. ಜೈಶಂಕರ್ ಮತ್ತು ರಾಹುಲ್ ಗಾಂಧಿ

   

ನವದೆಹಲಿ: ‘ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾಗಿ ಹಾಗೂ ಚೀನಾದ ರಾಯಭಾರಿಯ ಮನೆಪಾಠದಿಂದ ಜ್ಞಾನ ಪಡೆದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ‘ಚೀನಾ ಗುರು’ವಾಗಿದ್ದಾರೆ’ ಎಂದು ರಾಜ್ಯಸಭೆಯಲ್ಲಿ ಬುಧವಾರ ವಾಗ್ದಾಳಿ ನಡೆಸಿದ್ದಾರೆ.

ಚೀನಾದ ಸೈನಿಕರ ದಬ್ಬಾಳಿಕೆಗೆ ಭಾರತ ನಿರುತ್ತರವಾಗಿದೆ ಹಾಗೂ ಇತ್ತೀಚಿನ ತಮ್ಮ ಚೀನಾ ಭೇಟಿಯಲ್ಲಿ ಗುಪ್ತ ಚರ್ಚೆ ನಡೆದಿದೆಯೇ ಎಂಬ ವಿಪಕ್ಷಗಳ ಟೀಕೆಗೆ ಪ್ರತ್ಯುತ್ತರ ನೀಡಿದ ಜೈಶಂಕರ್, ‘ತಾನು ಅಂಥ ಯಾವುದೇ ಗೋಪ್ಯ ವ್ಯವಹಾರಗಳನ್ನು ನಡೆಸಿಲ್ಲ. ಭೇಟಿ ಸಂದರ್ಭದಲ್ಲಿ ಭಯೋತ್ಪಾದನೆ, ವ್ಯಾಪಾರ ಉತ್ತೇಜನ ಮತ್ತು ಎರಡೂ ರಾಷ್ಟ್ರಗಳ ಪರಸ್ಪರ ಹಿತವನ್ನಷ್ಟೇ ಚರ್ಚಿಸಿದ್ದೇನೆ’ ಎಂದಿದ್ದಾರೆ.

ADVERTISEMENT

‘2008ರಲ್ಲಿ ಬೀಜಿಂಗ್‌ ಒಲಿಂಪಿಕ್ಸ್‌ಗೆ ವಿಶೇಷ ಆಹ್ವಾನಿತರಾಗಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಭಾಗವಹಿಸಿದ್ದರು. 1960ರಿಂದಲೂ ಪಾಕಿಸ್ತಾನ ಹಾಗೂ ಚೀನಾದ ನಡುವಿನ ಸಹಕಾರ ಇದ್ದೇ ಇದೆ. ಆದರೆ ಹಿಂದಿನ ಸರ್ಕಾರವು ನೆರೆಯ ರಾಷ್ಟ್ರದೊಂದಿಗೆ ಸರಿಯಾಗಿ ವ್ಯವಹರಿಸಿಲ್ಲ’ ಎಂದು ಆರೋಪಿಸಿದ್ದಾರೆ.‌

‘ಚೀನಾದೊಂದಿಗೆ ಸರಿಯಾಗಿ ವ್ಯವಹರಿಸುತ್ತಿಲ್ಲ ಎಂದು ವಿಪಕ್ಷಗಳು ಆರೋಪಿಸಿವೆ. ವಿದೇಶಾಂಗ ವ್ಯವಹಾರಗಳ ವೃತ್ತಿಯಲ್ಲೇ ನಾನು 41 ವರ್ಷಗಳನ್ನು ಕಳೆದಿದ್ದೇನೆ. ಚೀನಾದಲ್ಲಿ ಭಾರತೀಯ ರಾಯಭಾರಿಯಾಗಿ ಅತಿ ಹೆಚ್ಚು ಕಾಲ ಕೆಲಸ ಮಾಡಿದ್ದೇನೆ. ಆದರೆ ನಮ್ಮ ನಡುವೆ ಇರುವ ಒಬ್ಬ ‘ಚೀನಾ ಗುರು’ವಿಗೆ ಚೀನಾ ಕುರಿತು ವಿಶೇಷ ಪ್ರೀತಿ ಇದೆ. ಹೀಗಾಗಿ ಚೀನಾ ಮತ್ತು ಭಾರತ ನಡುವೆ ಅವರು ‘ಚಿಂಡಿಯಾ’ ಎಂಬ ಒಪ್ಪಂದ ನಡೆಸಿದ್ದಾರೆ’ ಎಂದು ಜೈಶಂಕರ್ ವಾಗ್ದಾಳಿ ನಡೆಸಿದ್ದಾರೆ.

‘ಚಿಂಡಿಯಾ ಎಂಬುದು ಒಂದು ರೋಮಾಂಚನ ಕಲ್ಪನೆ‘ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು ಕೇಂದ್ರದ ವಿದೇಶಾಂಗ ನೀತಿಗಳ ವಿರುದ್ಧ ಹೇಳಿಕೆ ನೀಡಿದ್ದರು. ಇದಕ್ಕೆ ರಾಜ್ಯಸಭೆಯಲ್ಲಿ ಜೈಶಂಕರ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

‘ಪಾಕಿಸ್ತಾನ ಮತ್ತು ಚೀನಾ ಹತ್ತಿರವಾಗುತ್ತಿವೆ ಎಂದು ಈ ‘ಚೀನಾ ಗುರು’ ಹೇಳುತ್ತಿದ್ದಾರೆ. ಅದು ವಾಸ್ತವ ಕೂಡಾ. ಆದರೆ ಪಾಕ್‌ ಆಕ್ರಮಿತ ಕಾಶ್ಮೀರ ಭಾರತದ ಕೈತಪ್ಪಿದ ನಂತರವೇ ಇದು ನಡೆದದ್ದು. ಇತಿಹಾಸದ ತರಗತಿಯಲ್ಲಿ ನೀವೇನು ನಿದ್ರೆಗೆ ಜಾರಿದ್ದಿರೇ? ಈ ಸಹಕಾರ ಮತ್ತು ಪಾಲುದಾರಿಕೆಯು ಯುಪಿಎ ಅವಧಿಯಲ್ಲೇ ಹೆಚ್ಚಾಗಿದ್ದು. ಆದರೂ ಭಾರತದಲ್ಲಿ ಹೂಡಿಕೆ ಮಾಡಲು ಚೀನಾ ಕಂಪನಿಗಳಿಗೆ ಆಹ್ವಾನ ನೀಡಿದಿರಿ’ ಎಂದು ಜೈಶಂಕರ್ ಗುಡುಗಿದ್ದಾರೆ.

‘ಕಳೆದ 20 ವರ್ಷಗಳಲ್ಲಿ ಭಾರತದ ಭದ್ರತೆಗೆ ಅತಿ ದೊಡ್ಡ ಪೆಟ್ಟು ಬಿದ್ದಿದ್ದೇ ಶ್ರೀಲಂಕಾದ ಹಂಬಂಟೊಟಾ ಬಂದರನಲ್ಲಿ ಚೀನಾ ತನ್ನ ನೆಲೆಯನ್ನು ಸ್ಥಾಪಿಸಿದ ನಂತರ. ಆದರೆ ಆ ಕುರಿತು ಅಂದಿನ ಸರ್ಕಾರ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಆದರೆ ‘ಚೀನಾ ಗುರು’ ಮಾತ್ರ ನಮಗೆ ಪಾಠ ಮಾಡುವುದನ್ನು ನಿಲ್ಲಿಸಿಲ್ಲ. ಇವೆಲ್ಲವೂ ನಡೆದಿರುವುದು ಅವರ ಪಕ್ಷ ಆಡಳಿತದಲ್ಲಿ ಇದ್ದ ಅವಧಿಯಲ್ಲೇ ಎಂಬುದನ್ನು ಅವರು ನೆನಪಿಸಿಕೊಳ್ಳಬೇಕು’ ಎಂದಿದ್ದಾರೆ.

‘ಪರಸ್ಪರ ಆಸಕ್ತಿ, ಪರಸ್ಪರ ಸೂಕ್ಷ್ಮತೆ ಹಾಗೂ ಪರಸ್ಪರ ಗೌರವ ಎಂಬ ಈ ಮೂರು ಸೂತ್ರಗಳ ಆಧಾರದಲ್ಲಿ ಚೀನಾದೊಂದಿಗೆ ಸಂಬಂಧ ಉತ್ತಮಗೊಳ್ಳಲು ಸಾಧ್ಯ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಈ ಹಿಂದೆ ಕೆಲವರು ಮಾಡಿದಂತೆ ನಾನು ಯಾವುದೇ ಗೋಪ್ಯ ಸಭೆ ನಡೆಸುವುದಿಲ್ಲ. ಯಾವುದೇ ಗೋಪ್ಯ ಒಪ್ಪಂದವನ್ನೂ ಮಾಡಿಕೊಳ್ಳುವುದಿಲ್ಲ. ಅವೆಲ್ಲವೂ ಏನಿದ್ದರೂ ಆ ಒಲಿಂಪಿಕ್ಸ್‌ ಜನರ ಕೆಲಸ. ಚೀನಾ ಗುರು ಮಾತ್ರ ಮಾಡುವ ಕೆಲಸಗಳು ಅವಾಗಿದ್ದು, ಸಾಮಾನ್ಯರಲ್ಲ’ ಎಂದು ಜೈಂಶಕರ್ ವಾಗ್ದಾಳಿ ನಡೆಸಿದ್ದಾರೆ.

‘ಸಿಂಧೂ ಜಲ ಒಪ್ಪಂದ: ತಪ್ಪು ಸರಿ ಪಡಿಸಿದ್ದೇವೆ’ 

ನವದೆಹಲಿ: ಪಾಕಿಸ್ತಾನದ ಜತೆಗಿನ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು, ನೆಹರೂ ಅವರ ನೀತಿಗಳಲ್ಲಿನ ತಪ್ಪುಗಳನ್ನು ಸರಿಪಡಿಸಿದೆ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ರಾಜ್ಯಸಭೆಯಲ್ಲಿ ತಿಳಿಸಿದರು.

‘ನೆಹರೂ ಅವರು ಶಾಂತಿ ಸಲುವಾಗಿ ಈ ಒಪ್ಪಂದಕ್ಕೆ ಸಹಿ ಮಾಡಿರಲಿಲ್ಲ, ಬದಲಿಗೆ ಅವರನ್ನು ಓಲೈಸಲು ಸಹಿ ಮಾಡಿದ್ದರು’ ಎಂದು ಅವರು ದೂರಿದರು. 

ಕಾಂಗ್ರೆಸ್‌ ಟೀಕೆ: ಜೈಶಂಕರ್‌ ಅವರ ಹೇಳಿಕೆಯನ್ನು ಕಾಂಗ್ರೆಸ್‌ ತೀವ್ರವಾಗಿ ಟೀಕಿಸಿದೆ. ಓಲೈಕೆ ಸಲುವಾಗಿ ಸಿಂಧೂ ಜಲ ಒಪ್ಪಂದ ಮಾಡಿಕೊಳ್ಳಲಾಯಿತು ಎಂದು ವಿದೇಶಾಂಗ ಸಚಿವರು ನೀಡಿದ ಹೇಳಿಕೆಯಿಂದ ಆಘಾತವಾಗಿದೆ. ಒಂದು ಕಾಲದಲ್ಲಿ ವೃತ್ತಿಪರರು ಎಂದು ಹೆಸರಾಗಿದ್ದ ವಿದೇಶಾಂಗ ಸಚಿವರಿಂದ ಈ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ. ಬಹುಶಃ ಅವರು ವೃತ್ತಿಪರತೆಯನ್ನು ಹಿಂದೆಯೇ ತ್ಯಜಿಸಿದ್ದಾರೆ ಅನಿಸುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಕಿಡಿಕಾರಿದ್ದಾರೆ.  

ಹೊರನಡೆದ ವಿರೋಧ ಪಕ್ಷಗಳ ಸದಸ್ಯರು

ಪಹಲ್ಗಾಮ್‌ ಭಯೋತ್ಪಾದಕ ದಾಳಿ ಮತ್ತು ಆಪರೇಷನ್‌ ಸಿಂಧೂರ ಕುರಿತ ಚರ್ಚೆ ಸಂಸತ್ತಿನಲ್ಲಿ ಬುಧವಾರ ಮುಕ್ತಾಯವಾಯಿತು. ಸದನದ ಸಂಕೀರ್ಣದಲ್ಲಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆಗೆ ಉತ್ತರಿಸದೆ ಸದನವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟಿಸುತ್ತ ಸಭೆಯಿಂದ ಹೊರನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.