ADVERTISEMENT

ಲಂಡನ್‌: ಕೋವಿಡ್‌ ಕುರಿತು ಜೈಶಂಕರ್– ಆಂಟೊನಿ ಬ್ಲಿಂಕೆನ್‌ ಚರ್ಚೆ

ಲಂಡನ್‌ನಲ್ಲಿ ನಡೆದ ಜಿ–7 ವಿದೇಶಾಂಗ ಸಚಿವರ ಸಭೆಯ ನಡುವೆ ಮಾತುಕತೆ

ಪಿಟಿಐ
Published 4 ಮೇ 2021, 7:23 IST
Last Updated 4 ಮೇ 2021, 7:23 IST
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್‌ ಮತ್ತು ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅವರು ಲಂಡನ್‌ನಲ್ಲಿ ಸೋಮವಾರ ದ್ವಿಪಕ್ಷೀಯ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದು ಹೀಗೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್‌ ಮತ್ತು ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅವರು ಲಂಡನ್‌ನಲ್ಲಿ ಸೋಮವಾರ ದ್ವಿಪಕ್ಷೀಯ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದು ಹೀಗೆ.   

ಲಂಡನ್‌/ವಾಷಿಂಗ್ಟನ್‌: ಕೋವಿಡ್‌ ಸಾಂಕ್ರಾಮಿಕ ಎದುರಿಸುವ ಮಾರ್ಗಗಳು, ಇಂಡೊ–ಪೆಸಿಫಿಕ್ ಪ್ರದೇಶದಲ್ಲಿನ ಪರಿಸ್ಥಿತಿಯಲ್ಲಿ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರ ನೀಡುವ ಕುರಿತು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಜತೆ ಚರ್ಚೆ ನಡೆಸಿದರು.

ನಾಲ್ಕು ದಿನಗಳ ಭೇಟಿಗಾಗಿ ಬ್ರಿಟನ್‌ಗೆ ಬಂದಿರುವ ಅವರು, ಸೋಮವಾರ ಜಿ–7 ದೇಶಗಳ ವಿದೇಶಾಂಗ ಸಚಿವರ ಜತೆಗಿನ ಸಭೆಯ ನಡುವೆ, ಬ್ಲಿಂಕೆನ್ ಅವರೊಂದಿಗೆ ಮಾತುಕತೆ ನಡೆಸಿದರು. ಇದೇ ವೇಳೆ ಕೋವಿಡ್ ವಿರುದ್ಧದ ಭಾರತದ ಹೋರಾಟವನ್ನು ಅಮೆರಿಕ ಬೆಂಬಲಿಸಿದ್ದಕ್ಕಾಗಿ ಬ್ಲಿಂಕೆನ್‌ ಅವರಿಗೆ ಧನ್ಯವಾದ ಅರ್ಪಿಸಿದರು.

ಮಂಗಳವಾರ ನಡೆದ ಜಿ– 7 ದೇಶಗಳ ವಿದೇಶಾಂಗ ಮತ್ತು ಅಭಿವೃದ್ಧಿ ಸಚಿವರ ಸಭೆಗೂ ಮುನ್ನ, ಇಂಡೊ-ಪೆಸಿಫಿಕ್ ಪ್ರದೇಶ, ಹವಾಮಾನ ಬದಲಾವಣೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಮ್ಯಾನ್ಮಾರ್‌ಗೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಚರ್ಚಿಸಲಾಯಿತು ಎಂದು ಜೈಶಂಕರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

ಭಾರತದಲ್ಲಿ ಕೋವಿಡ್‌ ಸೃಷ್ಟಿಸುತ್ತಿರುವ ಸವಾಲುಗಳನ್ನು ಎದುರಿಸಲು ಅಮೆರಿಕದ ಬೆಂಬಲ ಕೇಳುವುದು, ಅದರಲ್ಲೂ ವಿಶೇಷವಾಗಿ ಆಮ್ಲಜನಕ ಮತ್ತು ರೆಮ್‌ಡಿಸಿವಿರ್ ಔಷಧ ಪೂರೈಕೆ ಬಗ್ಗೆ ಜೈಶಂಕರ್ ಮತ್ತು ಬ್ಲಿಂಕೆನ್‌ ಚರ್ಚೆ ನಡೆಸಿದರು.

‘ಬ್ಲಿಂಕೆನ್‌ ನನ್ನ ಹಳೆಯ ಸ್ನೇಹಿತ. ಅವರನ್ನು ವೈಯಕ್ತಿಕವಾಗಿ ಭೇಟಿಯಾಗುತ್ತಿರುವುದು ಖುಷಿತಂದಿದೆ. ಈ ಭೇಟಿಯಲ್ಲಿ ಜಾಗತಿಕವಾಗಿ ಕೋವಿಡ್‌ ಸೃಷ್ಟಿಸಿರುವ ಸವಾಲಿನ ಬಗ್ಗೆ ವಿವರವಾದ ಚರ್ಚೆ ನಡೆದಿದೆ. ಲಸಿಕೆ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಸರಬರಾಜು ಕುರಿತು ಚರ್ಚಿಸಲಾಯಿತು‘ ಎಂದು ಜೈಶಂಕರ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.