ನವದೆಹಲಿ/ಮಾಸ್ಕೊ : ಭಾರತ ಮತ್ತು ರಷ್ಯಾ ದೇಶಗಳು ಸಂಕೀರ್ಣ ಭೌಗೋಳಿಕ ರಾಜಕೀಯ ಸವಾಲುಗಳನ್ನು ಎದುರಿಸಲು ಸೃಜನಶೀಲ ಮತ್ತು ನವೀನ ವಿಧಾನಗಳನ್ನು ರೂಪಿಸಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಿಳಿಸಿದರು.
ರಷ್ಯಾದಿಂದ ಕಚ್ಚಾ ತೈಲ ಖರೀದಿಗೆ ಸಂಬಂಧಿಸಿದಂತೆ ಅಮೆರಿಕದರಿಂದ ಭಾರತದ ಮೇಲೆ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ ಅವರು ಈ ಕುರಿತು ಹೇಳಿಕೆ ನೀಡಿದರು.
‘ಎರಡೂ ದೇಶಗಳು ಇನ್ನೂ ಹೆಚ್ಚಿನದ್ದನ್ನು ಮತ್ತು ವಿಭಿನ್ನವಾಗಿ ಮಾಡುವ ಮಂತ್ರವನ್ನು ಮೈಗೂಡಿಸಿಕೊಳ್ಳಬೇಕಿದೆ’ ಎಂದು ಅವರು ಇದೇ ವೇಳೆ ಹೇಳಿದರು.
ಮಾಸ್ಕೊದಲ್ಲಿ ರಷ್ಯಾದ ಉಪ ಪ್ರಧಾನಿ ಡೆನಿಸ್ ಮಂತುರೊವ್ ಅವರನ್ನು ಭೇಟಿಯಾಗಿ ಜೈಶಂಕರ್ ಮಾತುಕತೆ ನಡೆಸಿದರು.
‘ಉಭಯ ದೇಶಗಳು ನಿರಂತರವಾಗಿ ದ್ವಿಪಕ್ಷೀಯ ವ್ಯಾಪಾರವನ್ನು ವೈವಿಧ್ಯಗೊಳಿಸಿಕೊಂಡಿವೆ. ಅದನ್ನು ಇನ್ನಷ್ಟು ವಿಸ್ತರಿಸಬೇಕಾದ ಅಗತ್ಯವಿದೆ’ ಎಂದು ಅವರು ಪ್ರತಿಪಾದಿಸಿದರು. ಜೈಶಂಕರ್ ಅವರು ರಷ್ಯಾಗೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ.
ಉಭಯ ದೇಶಗಳ ನಡುವಿನ ವ್ಯಾಪಾರ, ಆರ್ಥಿಕ, ವೈಜ್ಞಾನಿಕ, ತಾಂತ್ರಿಕ ಮತ್ತು ಸಾಂಸ್ಕೃತಿಕ ಸಹಕಾರ ಕುರಿತು ಇಬ್ಬರು ನಾಯಕರು ಮಾತುಕತೆ ನಡೆಸಿದ್ದಾರೆ.
2ನೇ ವಿಶ್ವ ಸಮರದ ಬಳಿಕ ಸಂಬಂಧ ಸ್ಥಿರ:
‘ಎರಡನೇ ವಿಶ್ವ ಸಮರದ ಬಳಿಕ ಭಾರತ ಮತ್ತು ರಷ್ಯಾ ನಡುವಿನ ಸಂಬಂಧಗಳು ಹೆಚ್ಚು ಸ್ಥಿರವಾಗಿವೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು ಸಮತೋಲಿತ ಮತ್ತು ಸುಸ್ಥಿರ ರೀತಿಯಲ್ಲಿ ವಿಸ್ತರಿಸಲು ಎರಡೂ ದೇಶಗಳು ಬದ್ಧವಾಗಿವೆ’ ಎಂದು ಜೈಶಂಕರ್ ಹೇಳಿದರು.
Highlights - null
‘ರಷ್ಯಾದಿಂದ ಅತ್ಯಧಿಕ ತೈಲ ಖರೀದಿಸುವ ದೇಶ ಭಾರತವಲ್ಲ’
‘ರಷ್ಯಾದಿಂದ ಅತಿ ಹೆಚ್ಚು ತೈಲ ಖರೀದಿಸುತ್ತಿರುವ ದೇಶ ಭಾರತವಲ್ಲ. ಅಲ್ಲದೆ 2022ರ ಬಳಿಕ ರಷ್ಯಾದೊಂದಿಗಿನ ವ್ಯಾಪಾರದಲ್ಲಿ ಅತ್ಯಧಿಕ ಏರಿಕೆ ಕಂಡ ದೇಶವೂ ನಮ್ಮದಲ್ಲ’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಗುರುವಾರ ತಿಳಿಸಿದರು.
ರಷ್ಯಾದ ವಿದೇಶಾಂಗ ಸಚಿವ ಸರ್ಗಿ ಲಾವ್ರೊವ್ ಅವರ ಜತೆ ಮಾತುಕತೆ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ‘ನಾವು ರಷ್ಯಾದಿಂದ ಅತಿ ಹೆಚ್ಚು ತೈಲ ಖರೀದಿಸುತ್ತಿರುವ ದೇಶವಲ್ಲ. ಚೀನಾ ದೇಶವು ರಷ್ಯಾದಿಂದ ಅತ್ಯಧಿಕ ತೈಲ ಖರೀಸುತ್ತಿದೆ. ಅಲ್ಲದೆ ನಾವು ರಷ್ಯಾದಿಂದ ಅತ್ಯಧಿಕ ಎಲ್‌ಎನ್‌ಜಿ ಅನ್ನೂ ಖರೀದಿಸುತ್ತಿಲ್ಲ. ಬಹುಷಃ ಅದನ್ನು ಐರೋಪ್ಯ ಒಕ್ಕೂಟ ಖರೀದಿಸುತ್ತಿರಬಹುದು’ ಎಂದು ಅವರು ಉತ್ತರಿಸಿದರು. ‘ಕೆಲ ವರ್ಷಗಳಿಂದ ಅಮೆರಿಕನ್ನರು ವಿಶ್ವದ ಇಂಧನ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ರಷ್ಯಾದಿಂದ ತೈಲ ಖರೀದಿ ಸೇರಿದಂತೆ ಎಲ್ಲವನ್ನೂ ಮಾಡಬೇಕು ಎಂದು ಹೇಳುತ್ತಿದ್ದರು. ಅದನ್ನೇ ನಾವು ಮಾಡಿದ್ದೇವೆ’ ಎಂದು ಜೈಶಂಕರ್ ಹೇಳಿದರು.
‘ಅಲ್ಲದೆ ಅಮೆರಿಕದಿಂದಲೂ ನಾವು ತೈಲವನ್ನು ಖರೀದಿಸುತ್ತಿದ್ದೇವೆ. ಆ ಪ್ರಮಾಣ ಕ್ರಮೇಣ ಹೆಚ್ಚುತ್ತಿದೆ’ ಎಂದು ಅವರು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.