ADVERTISEMENT

ಮುಂದಿನ 5 ವರ್ಷಗಳ ಅವಧಿಗೆ ಭಾರತದಲ್ಲಿ ₹3.2 ಲಕ್ಷ ಕೋಟಿ ಹೂಡಿಕೆ: ಜಪಾನ್‌

ಆರು ಒಪ್ಪಂದಗಳಿಗೆ ಜಪಾನ್‌–ಭಾರತ ಸಹಿ

ಪಿಟಿಐ
Published 19 ಮಾರ್ಚ್ 2022, 21:49 IST
Last Updated 19 ಮಾರ್ಚ್ 2022, 21:49 IST
ಒಪ್ಪಂದಗಳಿಗೆ ಸಹಿ ಹಾಕಿದ ಬಳಿಕ ಜಪಾನ್‌ ಪ್ರಧಾನಿ ಫುಮಿಯೊ ಕಿಷಿಡ ಮತ್ತು ಪ್ರಧಾನಿ ಮೋದಿ ಅವರು ಹಸ್ತಲಾಘವ ಮಾಡಿದರು  – ಪಿಟಿಐ ಚಿತ್ರ
ಒಪ್ಪಂದಗಳಿಗೆ ಸಹಿ ಹಾಕಿದ ಬಳಿಕ ಜಪಾನ್‌ ಪ್ರಧಾನಿ ಫುಮಿಯೊ ಕಿಷಿಡ ಮತ್ತು ಪ್ರಧಾನಿ ಮೋದಿ ಅವರು ಹಸ್ತಲಾಘವ ಮಾಡಿದರು  – ಪಿಟಿಐ ಚಿತ್ರ   

ನವದೆಹಲಿ: ಮುಂದಿನ ಐದು ವರ್ಷಗಳ ಅವಧಿಗೆ ಭಾರತದಲ್ಲಿ ₹3.2 ಲಕ್ಷ ಕೋಟಿ (5 ಟ್ರಿಲಿಯನ್‌ ಯೆನ್‌) ಬಂಡವಾಳ ಹೂಡಿಕೆ ಮಾಡುವ ಗುರಿ ಹೊಂದಿರುವುದಾಗಿ ಜಪಾನ್‌ ಶನಿವಾರ ಘೋಷಿಸಿದೆ.

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್‌ ಪ್ರಧಾನಿ ಫುಮಿಯೊ ಕಿಷಿಡ ನಡುವೆ ಮಾತುಕತೆ ನಡೆಯಿತು.

ಶುದ್ಧ ಇಂಧನ ಪಾಲುದಾರಿಕೆಯ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸಲು ಪ್ರತ್ಯೇಕವಾದ ಆರು ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಸಹಿ ಹಾಕಿದವು.

ADVERTISEMENT

ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ-ಜಪಾನ್ ಬಾಂಧವ್ಯವನ್ನು ಗಾಢಗೊಳಿಸುವುದರಿಂದ ಉಭಯ ದೇಶಗಳಿಗೆ ಪ್ರಯೋಜನವಾಗುವುದಲ್ಲದೆ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆ ಉತ್ತೇಜಿಸಲು ನೆರವಾಗಲಿದೆ ಎಂದು ಹೇಳಿದರು.

ಭದ್ರತೆ, ನಂಬಿಕೆ, ಸುಸ್ಥಿರವಾದ ಇಂಧನ ಪೂರೈಕೆಯ ಮಹತ್ವವನ್ನು ಭಾರತ ಮತ್ತು ಜಪಾನ್ ಅರ್ಥಮಾಡಿಕೊಂಡಿವೆ. ಪರಸ್ಪರ ಸಹಕಾರವನ್ನು ಇನ್ನಷ್ಟು ವಿಸ್ತರಿಸಲು ಎರಡೂ ರಾಷ್ಟ್ರಗಳು ನಿರ್ಧರಿಸಿವೆ ಎಂದು ಮೋದಿ ಹೇಳಿದರು.

ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣದ ನಂತರ ಮೋದಿಯವರ ಜತೆ ಮೊದಲ ಬಾರಿಗೆ ಮಾತುಕತೆ ನಡೆಸಿದ ಫುಮಿಯೊ ಕಿಷಿಡ, ರಷ್ಯಾದ ಆಕ್ರಮಣ ತುಂಬಾ ಗಂಭೀರ ವಿಷಯ. ಅಂತರರಾಷ್ಟ್ರೀಯ ಮಾನದಂಡಗಳ ಬುಡವನ್ನೇ ಈ ದಾಳಿ ಅಲುಗಾಡಿಸಿದೆ ಎಂದು ಹೇಳಿದರು.

ಒಂದು ರಾಷ್ಟ್ರದಯಥಾಸ್ಥಿತಿಯನ್ನು ಬಲ ಪ್ರಯೋಗಿಸಿ ಬದಲಾಯಿಸುವ ಏಕಪಕ್ಷೀಯ ಪ್ರಯತ್ನಕ್ಕೆ ಅವಕಾಶವನ್ನು ನೀಡಬಾರದು ಎಂದು ಕಿಷಿಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.