ADVERTISEMENT

ಅಗ್ನಿಪಥ ಯೋಜನೆ ಕುರಿತು ಮರುಚಿಂತನೆ ನಡೆಸಬೇಕು: ಜೆಡಿಯು ನಾಯಕ ಕೆ.ಸಿ.ತ್ಯಾಗಿ

ಪಿಟಿಐ
Published 6 ಜೂನ್ 2024, 10:35 IST
Last Updated 6 ಜೂನ್ 2024, 10:35 IST
ಕೆ.ಸಿ.ತ್ಯಾಗಿ ಮತ್ತು ನಿತೀಶ್‌ ಕುಮಾರ್‌
ಕೆ.ಸಿ.ತ್ಯಾಗಿ ಮತ್ತು ನಿತೀಶ್‌ ಕುಮಾರ್‌   

ಪಟ್ನಾ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಜಾರಿಗೊಳಿಸಿದ್ದ ‘ಅಗ್ನಿವೀರ್’ ಯೋಜನೆ ಕುರಿತು ಮರುಚಿಂತನೆ ನಡೆಸಬೇಕು ಎಂದು ಜನತಾದಳ (ಯು) ಬೇಡಿಕೆ ಮಂಡಿಸಿದೆ. ಈ ಮೂಲಕ ಹೊಸ ಜನಾದೇಶದ ಬಳಿಕ ಅಸ್ತಿತ್ವಕ್ಕೆ ಬರಲಿರುವ ನೂತನ ಸರ್ಕಾರದ ಸ್ವರೂಪ ಯಾವ ರೀತಿ ಇರಬಹುದು ಎಂಬ ಸೂಚನೆಯನ್ನು ನೀಡಿದೆ.

ನೂತನ ಸರ್ಕಾರ ರಚನೆಯಲ್ಲಿ ಜೆಡಿಯು ಪಾತ್ರ ನಿರ್ಣಾಯಕವಾಗಿದೆ. ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್ ಅವರ ಆಪ್ತರಾದ ಕೆ.ಸಿ.ತ್ಯಾಗಿ, ಅಗ್ನಿವೀರ್ ಯೋಜನೆಯ ಮರುಪರಿಶೀಲನೆಗೆ ಪಕ್ಷ ಬೇಡಿಕೆ ಮಂಡಿಸಲಿದೆ ಎಂದು ತಿಳಿಸಿದರು. 

ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಆದರೆ, ಏಕರೂಪದ ನಾಗರಿಕ ಸಂಹಿತೆಗೆ ಕುರಿತ ತೀರ್ಮಾನವನ್ನು ಬೆಂಬಲಿಸಲಿದೆ ಎಂದು ಸ್ಪಷ್ಟಪಡಿಸಿದರು. ಅಗ್ನಿವೀರ್ ಯೋಜನೆಗೆ ವಿರೋಧವಿದೆ. ಹೀಗಾಗಿ, ಮರುಪರಿಶೀಲಿಸಲು ಕೋರುತ್ತೇವೆ. ಆದರೆ, ನಾವು ಇದನ್ನು ವಿರೋಧಿಸುತ್ತಿಲ್ಲ ಎಂದು ತ್ಯಾಗಿ ತಿಳಿಸಿದರು.  

ADVERTISEMENT

ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬುದು ಮೈತ್ರಿಗಾಗಿ ಪಕ್ಷ ಮಂಡಿಸಲಿರುವ ಮತ್ತೊಂದು ಬೇಡಿಕೆಯಾಗಿದೆ. ಇದು, ನಮ್ಮ ಮನಸ್ಸಿನಲ್ಲಿದೆ ಎಂದು ಹೇಳಿದರು.

ಜಾತಿಗಣತಿಗೆ ಬಿಜೆಪಿಯಿಂದ ಯಾವುದೇ ವಿರೋಧವಿಲ್ಲ ಎಂದು ತ್ಯಾಗಿ ಇದೇ ಸಂದರ್ಭದಲ್ಲಿ ಹೇಳಿದರು. ಜಾತಿಗಣತಿ ಬೇಡಿಕೆ ಮಂಡಿಸಿದ್ದಕ್ಕಾಗಿ ಬಿಜೆಪಿಯು ಈ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿತ್ತು.

ದೇಶದ ಯಾವುದೇ ರಾಜಕೀಯ ಪಕ್ಷವು ಜಾತಿ ಆಧಾರಿತ ಗಣತಿಗೆ ವಿರೋಧ ವ್ಯಕ್ತಪಡಿಸಿಲ್ಲ. ಬಿಹಾರ ಈ ವಿಷಯದಲ್ಲಿ ಪಂಕ್ತಿ ಹಾಕಿಕೊಟ್ಟಿದೆ. ಸರ್ವಪಕ್ಷ ನಿಯೋಗ ಭೇಟಿ ಮಾಡಿದ್ದಾಗ ಪ್ರಧಾನಿಕೂಡಾ ವಿರೋಧಿಸಿಲ್ಲ. ಜಾತಿಗಣತಿಯು ಈ ಹೊತ್ತಿನ ಅಗತ್ಯವಾಗಿದೆ. ಅದಕ್ಕಾಗಿ ನಾವು ಒತ್ತಾಯಿಸುತ್ತೇವೆ ಎಂದು ಹೇಳಿದರು.

ಇದರ ಜೊತೆಗೆ, ಬಿಹಾರದಲ್ಲಿ ಪ್ರಸ್ತುತ ಜೆಡಿಯುಗೆ ಇರುವ ಜನಬೆಂಬಲದ ಲಾಭ ಪಡೆಯುವ ಕ್ರಮವಾಗಿ ಅವಧಿಪೂರ್ವ ಚುನಾವಣೆ ನಡೆಸಬೇಕು ಎಂಬ ಬೇಡಿಕೆಯನ್ನು ಜೆಡಿಯು ಮಂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.