ADVERTISEMENT

ಇಡಿ ದಾಳಿ ಸುದ್ದಿಯಲ್ಲಿ ಸಿಎಂ ಹೆಸರು ಗಂಟುಹಾಕಿದರೆ ಕ್ರಮ: ಜಾರ್ಖಂಡ್‌ ಸರ್ಕಾರ

ಪಿಟಿಐ
Published 25 ಆಗಸ್ಟ್ 2022, 5:56 IST
Last Updated 25 ಆಗಸ್ಟ್ 2022, 5:56 IST
ರಾಂಚಿ: ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೇನ್‌ ಅವರ ಆಪ್ತನಿಗೆ ಸೇರಿದ ಮನೆಯಲ್ಲಿ ಇ.ಡಿ ತಪಾಸಣೆ ಹಿನ್ನೆಲೆ ಸಿಆರ್‌ಪಿಎಫ್‌ ಸಿಬ್ಬಂದಿ ಕಾವಲು.
ರಾಂಚಿ: ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೇನ್‌ ಅವರ ಆಪ್ತನಿಗೆ ಸೇರಿದ ಮನೆಯಲ್ಲಿ ಇ.ಡಿ ತಪಾಸಣೆ ಹಿನ್ನೆಲೆ ಸಿಆರ್‌ಪಿಎಫ್‌ ಸಿಬ್ಬಂದಿ ಕಾವಲು.   

ರಾಂಚಿ: ಜಾರಿ ನಿರ್ದೇಶನಾಲಯ (ಇ.ಡಿ) ನಡೆಸುವ ದಾಳಿಗೆ ಸಂಬಂಧಿಸಿದ ಸುದ್ದಿಗಳಲ್ಲಿ ತಪಾಸಣೆಗೆ ಒಳಪಟ್ಟ ವ್ಯಕ್ತಿಗಳ ಜೊತೆಗೆ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರ ಹೆಸರು ಗಂಟುಹಾಕಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಾರ್ಖಂಡ್‌ ಸರ್ಕಾರ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದೆ.ಸಿಎಂ ಆಪ್ತ ಎನ್ನಲಾಗಿರುವ ವ್ಯಕ್ತಿಯಮನೆಯ ಮೇಲೂ ಇ.ಡಿ ದಾಳಿನಡೆಸಿದೆ.

ರಾಜ್ಯದಲ್ಲಿ ಸಕ್ರಿಯವಾಗಿರುವ ಕಾನೂನುಬಾಹಿರ ಗಣಿಗಾರಿಕೆಗೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಆರೋಪದ ಕುರಿತು ಇ.ಡಿ ವಿಚಾರಣೆ ನಡೆಸುತ್ತಿದೆ. ಇದಕ್ಕೆ ಸಂಬಂಧಿಸಿ ಜಾರ್ಖಂಡ್‌ ಮತ್ತು ಇತರ ರಾಜ್ಯಗಳ ಹಲವಾರು ಸ್ಥಳಗಳಲ್ಲಿ ಇ.ಡಿ ದಾಳಿ ನಡೆಸಿದೆ. ಎರಡು ಎಕೆ ಸರಣಿಯ ರೈಫಲ್‌ಗಳನ್ನು ಬುಧವಾರ ವಶಪಡಿಸಿಕೊಳ್ಳಲಾಗಿದೆ.

ರೈಫಲ್‌ಗಳು ಪ್ರೇಮ್‌ ಪ್ರಕಾಶ್‌ ಎಂಬುವವರ ಮನೆಯಲ್ಲಿ ತಪಾಸಣೆ ನಡೆಸುವ ವೇಳೆ ಪತ್ತೆಯಾಗಿದ್ದವು. ಆದರೆ ಈ ರೈಫಲ್‌ಗಳು ಪೊಲೀಸ್‌ ಇಲಾಖೆಗೆ ಸೇರಿದ್ದಾಗಿ ರಾಂಚಿ ಪೊಲೀಸರು ಹೇಳಿದ್ದಾರೆ.

ADVERTISEMENT

ಆಗಸ್ಟ್‌ 23ರಂದು ಕಾನ್ಸ್‌ಟೆಬಲ್‌ಗಳಿಬ್ಬರು ಕೆಲಸ ಮುಗಿಸಿ ಮರಳುವಾಗ ಪ್ರೇಮ್‌ ಪ್ರಕಾಶ್‌ ಅವರ ಸಿಬ್ಬಂದಿ ಬಳಿ ರೈಫಲ್‌ಗಳನ್ನು ಬಿಟ್ಟುಹೋಗಿದ್ದಾಗಿ ಅಪಾದಿಸಲಾಗಿದೆ. ಕರ್ತವ್ಯ ಲೋಪದ ಕಾರಣಕ್ಕೆ ಇಬ್ಬರನ್ನು ತಕ್ಷಣ ಅಮಾನತುಗೊಳಿಸಿರುವುದಾಗಿ ರಾಂಚಿ ಪೊಲೀಸರು ತಿಳಿಸಿದ್ದಾರೆ.

ಇ.ಡಿ ದಾಳಿ ಕುರಿತಾದ ಸುದ್ದಿಗಳನ್ನು ಪ್ರಸಾರ ಮಾಡುವ ವೇಳೆ ಉದ್ದೇಶಪೂರ್ವಕವಾಗಿ ಸಿಎಂ ಹೇಮಂತ್‌ ಸೊರೇನ್‌ ಅವರ ಹೆಸರನ್ನು ಗಂಟುಹಾಕುವ ಪ್ರಯತ್ನವನ್ನು ಕೆಲವು ಮಾಧ್ಯಮಗಳು ನಡೆಸಿವೆ ಎಂದು ಆರೋಪಿಸಿರುವ ಜಾರ್ಖಂಡ್‌ ಸರ್ಕಾರ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಕೇಂದ್ರ ತನಿಖಾ ಸಂಸ್ಥೆಗಳು ನಡೆಸುತ್ತಿರುವ ಕಾರ್ಯಾಚರಣೆಗೆ ಜಾರ್ಖಂಡ್‌ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಮತ್ತು ಮಾಧ್ಯಮಗಳ ಸ್ವಾತಂತ್ರ್ಯವನ್ನು ಗೌರವಿಸಲಾಗುವುದು ಎಂದು ಸಿಎಂ ಕಾರ್ಯದರ್ಶಿ ತಿಳಿಸಿದ್ದಾರೆ.

ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಇಬ್ಬರು ವಿಚಾರಣೆಗೆ ಒಳಪಟ್ಟ ಸಂದರ್ಭದಲ್ಲಿ ಬಾಯಿ ಬಿಟ್ಟಿರುವ ಮಾಹಿತಿಯನ್ನು ಆಧರಿಸಿ ಇ.ಡಿ ದಾಳಿ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.