ADVERTISEMENT

ವಿವಾದಿತ ‘ರಾಮಚರಿತ ಮಾನಸ’ ಕುರಿತು ಜಿತನ್ ರಾಂ ಮಾಂಝಿ ಹೇಳಿಕೆ

ಪಿಟಿಐ
Published 17 ಮಾರ್ಚ್ 2023, 15:41 IST
Last Updated 17 ಮಾರ್ಚ್ 2023, 15:41 IST
ಜಿತನ್ ರಾಂ ಮಾಂಝಿ
ಜಿತನ್ ರಾಂ ಮಾಂಝಿ   

ಪಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಂ ಮಾಂಝಿ ಅವರು ಶುಕ್ರವಾರ ವಿವಾದಿತ ‘ರಾಮಚರಿತ ಮಾನಸ’ ಮಹಾಕಾವ್ಯ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

‘ಹಿಂದೂಸ್ತಾನಿ ಅವಾಮಿ ಮೋರ್ಚಾ’ದ ಮುಖ್ಯಸ್ಥರಾಗಿರುವ ಮಾಂಝಿ ಅವರು, ‘ಮಹಾಘಟಬಂಧನ್’ ಸರ್ಕಾರದ ಭಾಗವಾಗಿದ್ದು, ‘ರಾಮಚರಿತಮಾನಸ’ ಕುರಿತು ರಾಜ್ಯ ಶಿಕ್ಷಣ ಸಚಿವ ಚಂದ್ರಶೇಖರ್ ಅವರ ವಿವಾದಾತ್ಮಕ ನಿಲುವಿನ ಬಗ್ಗೆ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದಾರೆ.‌

‘ಶ್ರೀರಾಮನು ಬುಡಕಟ್ಟು ಜನಾಂಗಕ್ಕೆ ಸೇರಿದ ಶಬರಿಯು ಅರ್ಪಿಸಿದ ಹಣ್ಣುಗಳನ್ನು ಸೇವಿಸಿದ. ಆದರೆ, ಶಬರಿಯ ವಂಶಸ್ಥರು (ದಲಿತರು, ಬುಡಕಟ್ಟು ಜನಾಂಗದವರು) ಭಗವಾನ್ ರಾಮನನ್ನು ಪೂಜಿಸುವವರಿಂದ ತಾರತಮ್ಯಕ್ಕೆ ಒಳಗಾಗಿದ್ದಾರೆ’ ಎಂದು ಸಚಿವ ಚಂದ್ರಶೇಖರ್ ಈಚೆಗೆ ಹೇಳಿಕೆ ನೀಡಿದ್ದರು.

ADVERTISEMENT

‘ರಾಮನು ಕಾಲ್ಪನಿಕ ವ್ಯಕ್ತಿಯೇ ಹೊರತು ಐತಿಹಾಸಿಕ ವ್ಯಕ್ತಿಯಲ್ಲ ಎಂದು ನಾನು ಯಾವಾಗಲೂ ನಂಬಿದ್ದೇನೆ. ಹಾಗೆ ಹೇಳಿದವರಲ್ಲಿ ನಾನೇ ಮೊದಲಿಗನಲ್ಲ. ಇದೇ ರೀತಿಯ ಅಭಿಪ್ರಾಯಗಳನ್ನು ರಾಹುಲ್ ಸಾಂಕೃತ್ಯಾಯನ್ ಮತ್ತು ಲೋಕಮಾನ್ಯ ತಿಲಕ್ ಅವರಂತಹ ವಿದ್ವಾಂಸರು ವ್ಯಕ್ತಪಡಿಸಿದ್ದಾರೆ. ಆದರೆ, ಅವರು ಬ್ರಾಹ್ಮಣರಾಗಿದ್ದರು. ಹಾಗಾಗಿ ಆಗ ಸಮಸ್ಯೆಗಳಾಗಲಿಲ್ಲ. ಆದರೆ, ಅದನ್ನೇ ನಾನು ಹೇಳಿದಾಗ ಜನರಿಗೆ ಸಮಸ್ಯೆಗಳಾಗುತ್ತವೆ’ ಎಂದು ಮಾಂಝಿ ಹೇಳಿದ್ದಾರೆ.

‘ನಾವು ಪುರಾಣದ ಪ್ರಕಾರ ಹೋದರೂ, ರಾವಣನು ರಾಮನಿಗಿಂತ ಕರ್ಮಕಾಂಡವನ್ನು (ಆಚಾರಗಳನ್ನು) ಚೆನ್ನಾಗಿ ತಿಳಿದಿದ್ದಾನೆ. ಅತ್ಯಂತ ಪುರಾತನವಾದ ರಾಮಾಯಣವನ್ನು ಬರೆದ ಕೀರ್ತಿಗೆ ಪಾತ್ರರಾದ ವಾಲ್ಮೀಕಿ ಋಷಿಯು, ತುಳಸೀದಾಸರಂತೆ (ರಾಮಚರಿತ ಮಾನಸ ಕರ್ತೃ) ಪೂಜಿಸಲ್ಪಡುವುದಿಲ್ಲ ಏಕೆ ಎಂದು ನಾವು ಯೋಚಿಸಬೇಕು’ ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ರಾಮಚರಿತಮಾನಸವು ಒಂದು ಸುಂದರವಾದ ಸಾಹಿತ್ಯ ಕೃತಿ ಮತ್ತು ಅನೇಕ ಒಳ್ಳೆಯ ವಿಷಯಗಳನ್ನು ಒಳಗೊಂಡಿದೆ. ಆದರೆ, ಸಾಮಾಜಿಕ ತಾರತಮ್ಯವನ್ನು ಮನ್ನಿಸುವ ಸಂಗತಿಗಳಿಂದ ಅದನ್ನು ಶುದ್ಧೀಕರಿಸಬೇಕು’ ಎಂದೂ ಮಾಂಝಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.