
ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಕ್ಯಾಂಪಸ್‌ನಲ್ಲಿ ಸೋಮವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಗುಂಪೊಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರಚೋದನಕಾರಿ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾಗಿದೆ.
ದೆಹಲಿ ಗಲಭೆ ಪಿತೂರಿ ಪ್ರಕರಣದಲ್ಲಿ ಬಂಧನದಲ್ಲಿರುವ ಜೆಎನ್‌ಯು ಹಳೆ ವಿದ್ಯಾರ್ಥಿ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಇದು ನಡೆದಿದೆ.
ಘೋಷಣೆ ಕೂಗಿದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ‘ಜೆಎನ್‌ಯು’ ಆಡಳಿತ ಮಂಡಳಿ ದೆಹಲಿ ಪೊಲೀಸರಿಗೆ ಮಂಗಳವಾರ ಪತ್ರ ಬರೆದು ಒತ್ತಾಯಿಸಿದೆ.
ವಸಂತ್ ಕುಂಜ್ (ಉತ್ತರ) ಠಾಣಾಧಿಕಾರಿಗೆ ಬರೆದಿರುವ ಈ ಪತ್ರದಲ್ಲಿ, ಜೆಎನ್‌ಯು ವಿದ್ಯಾರ್ಥಿ ಸಂಘಟನೆ (ಜೆಎನ್‌ಯುಎಸ್‌ಯು) ಜತೆಗೆ ಗುರುತಿಸಿಕೊಂಡಿರುವ ಕೆಲವು ವಿದ್ಯಾರ್ಥಿಗಳು ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಕ್ಯಾಂಪಸ್‌ನಲ್ಲಿ ‘ಗೆರಿಲ್ಲಾ ಡಾಭಾ ಜತೆಗೆ ಪ್ರತಿರೋಧದ ರಾತ್ರಿ’ ಎಂಬ ಕಾರ್ಯಕ್ರಮ ಆಯೋಜಿಸಿದ್ದರು. 30ರಿಂದ 35ರಷ್ಟು ವಿದ್ಯಾರ್ಥಿಗಳು ಸೇರಿದ್ದರು.
‘ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದ ಸುದ್ದಿ ಬಂದ ಬೆನ್ನಲ್ಲೇ, ಈ ಕಾರ್ಯಕ್ರಮದ ಸ್ವರೂಪ ಬದಲಾಯಿತು. ಪ್ರಧಾನಿ ಮತ್ತು ಗೃಹ ಸಚಿವರ ವಿರುದ್ಧ ವಿದ್ಯಾರ್ಥಿಗಳು ‘ಅತ್ಯಂತ ಆಕ್ಷೇಪಾರ್ಹ, ಪ್ರಚೋದನಕಾರಿ ಮತ್ತು ಕೆರಳಿಸುವ ಘೋಷಣೆಗಳನ್ನು ಕೂಗಿದರು. ಇದು ಸುಪ್ರೀಂ ಕೋರ್ಟ್‌ನ ನೇರ ನಿಂದನೆಯಾಗಿದೆ ಮತ್ತು ಜೆಎನ್‌ಯು ನೀತಿ ಸಂಹಿತೆ ಉಲ್ಲಂಘನೆಯಾಗಿದೆ’ ಎಂದು ಆರೋಪಿಸಲಾಗಿದೆ’
ಕ್ಯಾಂಪಸ್‌ನಲ್ಲಿ ‘2020ರ ಜನವರಿ 5ರ ಹಿಂಸಾಚಾರವನ್ನು ಖಂಡಿಸಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ಘೋಷಣೆಗಳು ಸೈದ್ಧಾಂತಿಕವಾಗಿದ್ದವು ಮತ್ತು ಯಾರನ್ನೂ ವೈಯಕ್ತಿಕವಾಗಿ ಗುರಿ ಮಾಡಿಲ್ಲ’ ಎಂದು ವಿದ್ಯಾರ್ಥಿ ಸಂಘಟನೆ ಹೇಳಿದೆ.
ಆದರೆ, ಆಡಳಿತ ಮಂಡಳಿ ಇದನ್ನು ತಳ್ಳಿಹಾಕಿದ್ದು, ‘ವಿದ್ಯಾರ್ಥಿಗಳು ವಿವೇಚನೆಯಿಂದ ಉದ್ದೇಶಪೂರ್ವಕವಾಗಿಯೇ ಈ ಘೋಷಣೆಗಳನ್ನು ಕೂಗಿದ್ದಾರೆ. ಇವು ಪುನರಾವರ್ತಿತವಾಗಿದ್ದವು. ಈ ಘೋಷಣೆಗಳು ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಯುಂಟು ಮಾಡಿವೆ. ಇದರಿಂದ ಕ್ಯಾಂಪಸ್‌ನ ಭದ್ರತೆ ಮತ್ತು ಸಾಮರಸ್ಯಕ್ಕೂ ಧಕ್ಕೆ ಉಂಟಾಗಿದೆ’ ಎಂದು ಆರೋಪಿಸಿದೆ. ‘ಭಾರತೀಯ ನ್ಯಾಯ ಸಂಹಿತೆಯ ಕಲಂನಡಿ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಬೇಕು’ ಎಂದು ಜೆಎನ್‌ಯುನ ಮುಖ್ಯ ಭದ್ರತಾ ಅಧಿಕಾರಿ ಆಗ್ರಹಿಸಿದ್ದಾರೆ.
ಜೆಎನ್‌ಯು ಆಡಳಿತ ಮಂಡಳಿ ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ವಿದ್ಯಾರ್ಥಿ ಸಂಘಟನೆಯ ಈಗಿನ ಅಧ್ಯಕ್ಷೆ ಅದಿತಿ ಮಿಶ್ರಾ ಸೇರಿದಂತೆ ಹಲವರ ಹೆಸರನ್ನು ಉಲ್ಲೇಖಿಸಲಾಗಿದೆ. ಘೋಷಣೆಗೆ ಸಂಬಂಧಿಸಿದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದೂ ತಿಳಿಸಲಾಗಿದೆ.
ಆಂತರಿಕ ತನಿಖಾ ಸಮಿತಿ ರಚನೆ
‘ಜೆಎನ್‌ಯು ಆಡಳಿತ ಮಂಡಳಿ ಮಂಗಳವಾರ ಸಭೆ ನಡೆಸಿದ್ದು ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದೆ. ಇದಕ್ಕಾಗಿ ಆಂತರಿಕ ತನಿಖಾ ಸಮಿತಿಯೊಂದನ್ನು ರಚಿಸಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.