
ಉಮರ್ ಖಾಲಿದ್
(ಪಿಟಿಐ ಚಿತ್ರ)
ದೆಹಲಿ: ದೆಹಲಿ ಗಲಭೆ ಪಿತೂರಿ ಪ್ರಕರಣದಲ್ಲಿ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಜೆಎನ್‌ಯು ವಿದ್ಯಾರ್ಥಿಗಳ ಗುಂಪೊಂದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ವಿವಾದಕ್ಕೀಡಾಗಿದ್ದಾರೆ.
ಸೋಮವಾರ ರಾತ್ರಿ ನಡೆದ ಪ್ರತಿಭಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆ ಆದಿತಿ ಮಿಶ್ರಾ, 2020 ಜನವರಿ 5ರ ಹಿಂಸಾಚಾರದ ಘಟನೆಯನ್ನು ಖಂಡಿಸಿ ಪ್ರತಿ ವರ್ಷವೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಾರೆ ಎಂದು ಹೇಳಿದ್ದಾರೆ.
'ಪ್ರತಿಭಟನೆಯಲ್ಲಿ ಹೇಳಲಾದ ಘೋಷಣೆಗಳು ಸೈದ್ಧಾಂತಿಕವಾಗಿತ್ತು. ಯಾರನ್ನೂ ವೈಯಕ್ತಿಕವಾಗಿ ಗುರಿ ಮಾಡಿಲ್ಲ' ಎಂದಿದ್ದಾರೆ.
ಏತನ್ಮಧ್ಯೆ ಘೋಷಣೆ ಸಂಬಂಧ ಯಾವುದೇ ದೂರು ಬಂದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿ ಗಲಭೆ ಪಿತೂರಿ ಪ್ರಕರಣದಲ್ಲಿ ಇತರೆ ಐವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದ ಸುಪ್ರೀಂ ಕೋರ್ಟ್, ಪ್ರಕರಣದ ಎಲ್ಲ ಆರೋಪಿಗಳನ್ನು ಒಂದೇ ನೆಲೆಯಲ್ಲಿ ನೋಡಲಾಗದು ಎಂದು ಹೇಳಿತ್ತು. ಗಲಭೆಯ ಯೋಜನೆ ರೂಪಿಸುವಿಕೆ, ಸಜ್ಜುಗೊಳಿಸುವಿಕೆ ಮತ್ತು ಕಾರ್ಯತಂತ್ರ ಹೆಣೆಯುವುದರಲ್ಲಿ ಖಾಲಿದ್ ಮತ್ತು ಇಮಾಮ್ ಭಾಗಿಯಾಗಿದ್ದಾರೆ ಎಂಬ ಆರೋಪ ಮೇಲ್ನೋಟಕ್ಕೆ ನಿಜ ಎಂಬುದಾಗಿ ಕಂಡುಬಂದಿದೆ. ಹಾಗಾಗಿ ಜಾಮೀನು ನಿರಾಕರಿಸಲಾಗಿದೆ ಎಂದು ಪೀಠ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.