ADVERTISEMENT

ಬೈಡನ್ ವಿನಮ್ರ ವ್ಯಕ್ತಿ: ಫಾ. ನಿಕೋಲಸ್ ಡಯಾಸ್ ಬಣ್ಣನೆ

ಪವಿತ್ರ ಕಮ್ಯೂನಿಯನ್ ಸೇವೆಯಲ್ಲಿ ಪಾಲ್ಗೊಂಡ ಅಮೆರಿಕದ ಅಧ್ಯಕ್ಷ

ಪಿಟಿಐ
Published 10 ಸೆಪ್ಟೆಂಬರ್ 2023, 11:31 IST
Last Updated 10 ಸೆಪ್ಟೆಂಬರ್ 2023, 11:31 IST
ಜೋ ಬೈಡನ್
ಜೋ ಬೈಡನ್   

ಪಣಜಿ (ಪಿಟಿಐ): ‘ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಅತ್ಯಂತ ವಿನಮ್ರ ವ್ಯಕ್ತಿ. ಅವರ ಜೀವನದ ಮೇಲೆ ಅವರ ಅಜ್ಜಿಯು ಅಪಾರ ಪ್ರಭಾವ ಬೀರಿದ್ದಾರೆ’ ಎಂದು ದೆಹಲಿ ಆರ್ಚ್‌ಡಯೋಸಿಸ್ ಪ್ರಾರ್ಥನಾ ಆಯೋಗದ ಕಾರ್ಯದರ್ಶಿ ಫಾದರ್ ನಿಕೋಲಸ್ ಡಯಾಸ್ ಅವರು ಬಣ್ಣಿಸಿದ್ದಾರೆ. 

ಜಿ–20 ಶೃಂಗಸಭೆಗೂ ಮುನ್ನ ಶನಿವಾರ ನವದೆಹಲಿಯಲ್ಲಿ ಬೈಡನ್ ಅವರು ತಂಗಿದ್ದ ಹೋಟೆಲ್‌ನಲ್ಲಿ 30 ನಿಮಿಷಗಳ ಪವಿತ್ರ ಕಮ್ಯೂನಿಯನ್ ಸೇವೆಯ(ಪ್ರಾರ್ಥನಾ ಸಭೆ) ವೇಳೆ ಫಾದರ್ ಡಯಾಸ್ ಅವರು ಬೈಡನ್ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಅವರು ಜಿ20 ಶೃಂಗಸಭೆಯ ಯಶಸ್ಸು ಹಾಗೂ ಭಾರತ ಮತ್ತು ಅಮೆರಿಕದ ಒಳಿತಿಗಾಗಿ ಫಾದರ್ ಡಯಾಸ್ ಪ್ರಾರ್ಥಿಸಿದರು. 

ತಮ್ಮ ಭೇಟಿಯ ಕುರಿತು ಪಿಟಿಐ ಜೊತೆಗೆ ಮಾಹಿತಿ ಹಂಚಿಕೊಂಡ ಫಾ. ಡಯಾಸ್ ಅವರು, ಪ್ರಾರ್ಥನೆಗಾಗಿ ತಮ್ಮ ಸಮಯವನ್ನು ಮೀಸಲಿಟ್ಟಿದ್ದಕ್ಕಾಗಿ ಜೋ ಬೈಡನ್ ಅವರನ್ನು ಅತ್ಯಂತ ವಿನಮ್ರ ವ್ಯಕ್ತಿ ಎಂದೂ ಬಣ್ಣಿಸಿದ್ದಾರೆ. 

ADVERTISEMENT

‘ನಮ್ಮಿಬ್ಬರ ಭೇಟಿಯ ವೇಳೆ ನಡೆದ ಸಂಭಾಷಣೆಯು ಗೋವಾ ಮತ್ತು ಭಾರತದ ಸುತ್ತಮುತ್ತಲಿನ ವಿಷಯಗಳಿಗೆ ಸಂಬಂಧಿಸಿದ್ದಾಗಿತ್ತು. ಭಾರತದಲ್ಲಿ ಕ್ರೈಸ್ತ ಧರ್ಮ ಉಗಮವಾದ ಬಗ್ಗೆ ಅವರಲ್ಲಿ ಪ್ರಸ್ತಾಪಿಸಿದೆ. ಅಂತೆಯೇ ಭಾರತದಲ್ಲಿರುವ ಚರ್ಚ್ ಜಗತ್ತಿನಲ್ಲಿ ಕ್ರೈಸ್ತ ಧರ್ಮದಷ್ಟೇ ಹಳೆಯದ್ದು’ ಎಂಬುದನ್ನೂ ಅವರ ಗಮನಕ್ಕೆ ತಂದಿರುವುದಾಗಿಯೂ ಹೇಳಿದ್ದಾರೆ. 

ತಮ್ಮ ಮೇಲೆ ಕ್ರೈಸ್ತ ಧರ್ಮ ಹೇಗೆ ಪ್ರಭಾವ ಬೀರಿದೆ ಹಾಗೂ ಫಾದರ್ ಪೋಷ್ ಫ್ರಾನ್ಸಿಸ್ ತಮಗೆ ಹೇಗೆ ನಿಕಟವರ್ತಿ ಎಂಬ ಬಗ್ಗೆ ಹಂಚಿಕೊಂಡ ಬೈಡನ್. ತಮ್ಮ ಜೀವನದ ಮೇಲೆ ತಮ್ಮ ಅಜ್ಜಿಯು ಕ್ಯಾಥೋಲಿಕ್ ಆಗಿ ಹೇಗೆ ಪ್ರಭಾವ ಬೀರಿದರು. ಹಳೆಯ ಗೋವಾದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಅವರು ತಮ್ಮ ವೃತ್ತಿಯ ಮೇಲೆ ಹೇಗೆ ಪ್ರಭಾವ ಬೀರಿದರು ಎಂಬುದನ್ನೂ ಹಂಚಿಕೊಂಡರು ಎಂದಿದ್ದಾರೆ. 

ತಾವು ಒಯ್ದಿದ್ದ ಗೋವಾದ ಖಾದ್ಯ ಬೆಂಬಿಕಾ ಅನ್ನು ಜೋ ಬೈಡನ್ ಸೇವಿಸಿದರು ಎಂಬುದಾಗಿಯೂ ಫಾ. ಡಯಾಸ್ ಅವರು ಹೇಳಿದ್ದಾರೆ. 

ಭೇಟಿಯು ಮುಕ್ತಾಯಗೊಳ್ಳುವ ಮುನ್ನ ಬೈಡನ್ ಅವರು ಅಧ್ಯಕ್ಷರ ಮುದ್ರೆಯೊಳ್ಳ ಸೀಲ್ ನಂ. 261 ಸ್ಮರಣಿಕೆಯನ್ನು ಫಾದರ್ ಡಯಾಸ್ ಅವರಿಗೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.