ADVERTISEMENT

ಶಾಲಾಮಕ್ಕಳಿಗೆ ಚಪಾತಿ ಮತ್ತು ಉಪ್ಪು;ವರದಿ ಮಾಡಿದ ಪತ್ರಕರ್ತನ ವಿರುದ್ಧ ಕೇಸು ದಾಖಲು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 10:49 IST
Last Updated 3 ಸೆಪ್ಟೆಂಬರ್ 2019, 10:49 IST
   

ಮಿರ್ಜಾಪುರ್: ಉತ್ತರ ಪ್ರದೇಶದ ಮಿರ್ಜಾಪುರ್ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಚಪಾತಿ ಮತ್ತು ಉಪ್ಪು ನೀಡಲಾಗುತ್ತಿದೆ ಎಂದು ಅಲ್ಲಿನ ಸ್ಥಳೀಯ ಪತ್ರಕರ್ತರೊಬ್ಬರು ಮೊದಲು ವರದಿ ಪ್ರಕಟಿಸಿದ್ದರು. ಈ ವರದಿ ಪ್ರಕಟಿಸಿದ ವರದಿಗಾರನ ವಿರುದ್ಧ ಪೊಲೀಸರು ಅಪರಾಧ ಸಂಚು ಆರೋಪ ಹೊರಿಸಿದ್ದಾರೆ ಎಂದು ದೈನಿಕ್ ಜಾಗರಣ್ ವರದಿ ಮಾಡಿದೆ.

ಬಿಸಿಯೂಟ ಪೂರೈಕೆ ಕಡಿಮೆಯಾಗಿದೆ ಎಂದು ಗೊತ್ತಿದ್ದೂ ಮಕ್ಕಳು ಉಪ್ಪು ಜತೆ ಚಪಾತಿ ತಿನ್ನುತ್ತಿರುವ ವಿಡಿಯೊ ರೆಕಾರ್ಡ್ ಮಾಡುವಂತೆ ಆ ಗ್ರಾಮದ ಮುಖ್ಯಸ್ಥರೊಬ್ಬರು ಪತ್ರಕರ್ತನಿಗೆ ಹೇಳಿದ್ದರು. ಬಿಸಿಯೂಟದ ನಿರ್ವಹಣೆ ಗ್ರಾಮದ ಮುಖ್ಯಸ್ಥನ ಜವಾಬ್ದಾರಿ. ಬಿಸಿಯೂಟ ಕಡಿಮೆ ಇದೆ ಎಂದು ತಿಳಿದಿರುವಾಗ ಅದನ್ನು ಶಾಲೆಯವರಗಮನಕ್ಕೆ ತಂದು ತರಕಾರಿ ಅಡುಗೆ ಮಾಡಿ ಬಡಿಸುವಂತೆ ಹೇಳಬೇಕಿತ್ತು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಮಕ್ಕಳು ಚಪಾತಿ ಮತ್ತು ಉಪ್ಪು ತಿನ್ನುತ್ತಿರುವ ವಿಡಿಯೊ ಆಗಸ್ಟ್ 23ರಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ವಿಡಿಯೊ ವೈರಲ್ ಆಗುತ್ತಿದ್ದಂತೆ ಜಿಲ್ಲಾಡಳಿತ ತನಿಖೆಗಾಗಿ ಆದೇಶಿತ್ತು. ಮಿರ್ಜಾಪುರ್ ಜಮಾಲ್‌ಪುರ್ ಬ್ಲಾಕ್‌ನಲ್ಲಿರುವ ಸಿಯೂರ್ ಪ್ರೈಮರಿ ಶಾಲೆಯಲ್ಲಿ ಸುಮಾರು 100 ರಷ್ಚು ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿದೆ ಎಂದು ವರದಿಯಲ್ಲಿದೆ. ಈ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ನೀಡಿದೆ.

ADVERTISEMENT

ಮಕ್ಕಳು ಚಪಾತಿ, ಉಪ್ಪು ತಿನ್ನುತ್ತಿರುವ ವಿಡಿಯೊವನ್ನು ಹಿಂದಿ ಪತ್ರಿಕೆ ಜನಸಂದೇಶ್ ಟೈಮ್ಸ್ ಪತ್ರಕರ್ತ ಪವನ್ ಜೈಸ್ವಾಲ್ ಎಂಬವರು ರೆಕಾರ್ಡ್ ಮಾಡಿದ್ದರು ಎಂದು ಎಫ್‌ಐಆರ್‌ನಲ್ಲಿದೆ. ಶನಿವಾರ ಶಿಕ್ಷಣ ಇಲಾಖೆಯು ಜೈಸ್ವಾಲ್, ಗ್ರಾಮದ ಮುಖ್ಯಸ್ಥರ ಪ್ರತಿನಿಧಿ ರಾಜ್‌ಕುಮಾರ್ ಪಾಲ್ ಮತ್ತು ಅಪರಿಚಿತ ವ್ಯಕ್ತಿಯೊಬ್ಬರ ವಿರುದ್ಧ ಕೇಸು ದಾಖಲಿಸಿತ್ತು.

ಮಕ್ಕಳ ಬಿಸಿಯೂಟಕ್ಕಾಗಿ ತರಕಾರಿ ಸಾಲುತ್ತಿಲ್ಲ ಎಂಬ ವಿಷಯವನ್ನು ಪಾಲ್ ಅವರು ಆಗಸ್ಟ್ 22, ಬೆಳಗ್ಗೆ 10.47ಕ್ಕೆ ಶಾಲೆಯ ಶಿಕ್ಷಕರಿಗೆ ತಿಳಿಸಿದ್ದರು. ಶಾಲೆಯ ಶಿಕ್ಷಕರು ಬಿಸಿಯೂಟಕ್ಕಾಗಿ ಸಾಮಾಗ್ರಿ ಖರೀದಿಸಲು ಹೋದಾಗ ಮಕ್ಕಳಿಗೆ ಚಪಾತಿ ಮತ್ತು ಉಪ್ಪು ಬಡಿಸಲಾಗಿದೆ.ಇದನ್ನು ಪತ್ರಕರ್ತ ವಿಡಿಯೊ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿದೆ.

ಈ ಬಗ್ಗೆ ತನಿಖೆ ನಡೆಸಿದಾಗ ತಿಳಿದುಬಂದ ವಿಷಯ ಏನೆಂದರೆ ಶಾಲೆಯ ಶಿಕ್ಷಕರು ತರಕಾರಿ ಮಾರುವವನಿಗೆ ಮುಂಗಡವಾಗಿ ಹಣ ನೀಡಿರುತ್ತಾರೆ. ಯಾಕೆಂದರೆ ಅಡುಗೆಯರು ಆತನ ಬಳಿಗೆ ಹೋದಾಗ ತರಕಾರಿ ಕೊಡಬೇಕು ಎಂಬ ಉದ್ದೇಶದಿಂದ. ಆದಾಗ್ಯೂ, ಅಡುಗೆಯವರು ಈತನ ಬಳಿ ಹೋಗಿಲ್ಲ. ತನ್ನ ಬಳಿ ಮುಂಗಡವಾಗಿ ಕೊಟ್ಟಿರುವ ಹಣ ₹300 ಇದೆ ಅಂದಿದ್ದಾರೆ ತರಕಾರಿ ಮಾರುವ ವ್ಯಕ್ತಿ.

ಬೆಳಗ್ಗೆ 10.53ಕ್ಕೆ ಪಾಲ್ ಅವರು ಜೈಸ್ವಾಲ್ ಅವರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದ್ದು ಇವರಿಬ್ಬರೂ ಮಧ್ಯಾಹ್ನದ ಹೊತ್ತಿಗೆ ಶಾಲೆಗೆ ಹೋಗಿದ್ದಾರೆ. ಮಕ್ಕಳಿಗೆ ಚಪಾತಿ ಮತ್ತು ಉಪ್ಪು ಬಡಿಸುವಂತೆ ಪಾಲ್, ಅಡುಗೆಯವರಿಗೆ ಹೇಳಿದ್ದು ಜೈಸ್ವಾಲ್ ಅದನ್ನು ವಿಡಿಯೊ ಚಿತ್ರೀಕರಣ ಮಾಡಿದ್ದಾರೆ.

ಜೈಸ್ವಾಲ್ ಅವರು ಮದ್ರಣ ಮಾಧ್ಯಮ ಪತ್ರಕರ್ತರಾಗಿದ್ದು, ಈ ವಿಡಿಯೊವನ್ನು ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಬಿತ್ತರಿಸುವಂತೆ ಪಾಲ್ ಹೇಳಿದ್ದಾರೆ. ಈ ವಿಡಿಯೊವನ್ನು ಎಎನ್‌ಐ ಸುದ್ದಿಸಂಸ್ಥೆಯ ಪತ್ರಕತ್ರರಿಗೆ ಕಳುಹಿಸಲಾಗಿತ್ತು.

ಆ ದಿನ ಮಧ್ಯಾಹ್ನದ ವರೆಗೆ ತರಕಾರಿ ಬೇಯಿಸಲು ಆಗುವುದಿಲ್ಲ ಎಂಬುದರ ಬಗ್ಗೆ ರಾಜ್‌ಕುಮಾರ್ ಪಾಲ್ ಅವರಿಗೆ ಗೊತ್ತಿತ್ತು. ತರಕಾರಿಯನ್ನು ತಂದುಕೊಡುವ ಬದಲು ಅವರು ಜೈಸ್ವಾಲ್ ಮೂಲಕ ವಿಡಿಯೊ ಶೂಟ್ ಮಾಡಿಸಿ ಅದನ್ನು ವೈರಲ್ ಮಾಡಿದ್ದಾರೆ. ರಾಜ್‌ಕುಮಾರ್ ಪಾಲ್ಮತ್ತು ಪವನ್ ಕುಮಾರ್ ಜೈಸ್ವಾಲ್ ಅವರು ಯೋಗಿ ಆದಿತ್ಯನಾಥ ನೇತೃತ್ವದಉತ್ತರ ಪ್ರದೇಶ ಸರ್ಕಾರದಬಿಸಿಯೂಟ ಯೋಜನೆಗೆ ಕಳಂಕವನ್ನುಂಟು ಮಾಡುವುದಕ್ಕಾಗಿ ಯತ್ನಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿದೆ.

ಮೂವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 120ಬಿ (ಅಪರಾಧ ಸಂಚು), 186 ( ಸಾರ್ವಜನಿಕ ಸೇವೆಗೆ ಧಕ್ಕೆಯುಂಟು ಮಾಡುವುದು), 193 (ತಪ್ಪು ಸಾಕ್ಷ್ಯ) ಮತ್ತು 420 ( ವಂಚನೆ) ಆಪಾದನೆ ಹೊರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.