ADVERTISEMENT

ಉತ್ತರ ಪ್ರದೇಶದಲ್ಲಿ ಗುಂಡಿಕ್ಕಿ ಪತ್ರಕರ್ತನ ಹತ್ಯೆ

ಪಿಟಿಐ
Published 25 ಆಗಸ್ಟ್ 2020, 2:32 IST
Last Updated 25 ಆಗಸ್ಟ್ 2020, 2:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬಲ್ಲಿಯಾ (ಉತ್ತರಪ್ರದೇಶ): ಹಿಂದಿ ಸುದ್ದಿ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತರೊಬ್ಬರನ್ನು ಸೋಮವಾರ ರಾತ್ರಿ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಪತ್ರಕರ್ತ ರತನ್‌ ಸಿಂಗ್‌ (45) ಎಂದು ಗುರುತಿಸಲಾಗಿದೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಯಾದವ್ ತಿಳಿಸಿದ್ದಾರೆ.

ರತನ್‌ ಸಿಂಗ್ ಕೊಲೆಗೆ ಸಂಬಂಧಿಸಿದಂತೆ ದಿನೇಶ್ ಸಿಂಗ್, ಅರವಿಂದ್ ಸಿಂಗ್, ಸುನೀಲ್ ಸಿಂಗ್ ಮತ್ತು ಮೋತಿ ಸಿಂಗ್ ಎಂಬ ನಾಲ್ವರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನಿಶ್ ಅವಸ್ಥಿ ತಿಳಿಸಿದ್ದಾರೆ.

ADVERTISEMENT

ಪತ್ರಕರ್ತ ರತನ್‌ ಸಿಂಗ್‌ ಮತ್ತು ನೆರೆಯವರೊಂದಿಗೆ ಆಸ್ತಿ ವಿವಾದವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

'ರತನ್ ತನ್ನ ನೆರೆಯವರೊಂದಿಗೆ ಆಸ್ತಿ ವಿವಾದ ಹೊಂದಿದ್ದರು. ಸೋಮವಾರ ಸಂಜೆ ಎರಡೂ ಕಡೆಯವರ ನಡುವೆ ಜಗಳ ನಡೆದಿದೆ. ಕೊನೆಗೆ ನೆರೆಯವರು ರತನ್‌ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಆರೋಪಿ ದಿನೇಶ್ ಸಿಂಗ್ ರತನ್ ಸಿಂಗ್ ಅವರ ಆಸ್ತಿಯಲ್ಲಿ ಭಾಗಿದಾರನೂ ಹೌದು’ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ ) ಪ್ರಶಾಂತ್ ಕುಮಾರ್ ಹೇಳಿದರು.

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ 2019ರಲ್ಲಿ ಎರಡೂ ಕಡೆಯವರು ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನೂ ದಾಖಲಿಸಿದ್ದರು ಎಂದು ಪೊಲೀಸರು ಹೇಳಿದರು.

‘ಆಸ್ತಿ ವಿವಾದದಿಂದ ಕೊಲೆ ನಡೆದಿದೆಯೇ ಹೊರತು, ರತನ್ ಅವರ ವೃತ್ತಿ ಕಾರಣಕ್ಕೆ ಈ ಕೊಲೆ ನಡೆದಿಲ್ಲ,’ ಎಂದು ಪೊಲೀಸ್‌ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.