ADVERTISEMENT

ಪಿಎಂ, ಸಿಎಂ ಸ್ವಯಂ ಪದಚ್ಯುತಗೊಳ್ಳುವ ಮಸೂದೆ: ತಿಂಗಳಾದರೂ ರಚನೆಯಾಗದ ಜೆಪಿಸಿ

ಶೆಮಿನ್ ಜಾಯ್‌
Published 22 ಸೆಪ್ಟೆಂಬರ್ 2025, 11:18 IST
Last Updated 22 ಸೆಪ್ಟೆಂಬರ್ 2025, 11:18 IST
<div class="paragraphs"><p>ಮಸೂದೆ ಮಂಡಿಸಿದ್ದ ಅಮಿತ್ ಶಾ ಹಾಗೂ ಮಸೂದೆ ವಿರೋಧಿಸಿ ಪ್ರತಿಭಟನೆ ಮಾಡಿದ್ದ ವಿರೋಧ ಪಕ್ಷಗಳು</p></div>

ಮಸೂದೆ ಮಂಡಿಸಿದ್ದ ಅಮಿತ್ ಶಾ ಹಾಗೂ ಮಸೂದೆ ವಿರೋಧಿಸಿ ಪ್ರತಿಭಟನೆ ಮಾಡಿದ್ದ ವಿರೋಧ ಪಕ್ಷಗಳು

   

– ಪಿಟಿಐ ಚಿತ್ರ

ನವದೆಹಲಿ: 30ಕ್ಕೂ ಅಧಿಕ ದಿನ ಜೈಲಿನಲ್ಲಿ ಕಳೆದರೆ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಸೇರಿ ಶಾಸಕಾಂಗದ ಪ್ರತಿನಿಧಿಗಳು ಹುದ್ದೆಯಿಂದ ಸ್ವಯಂ ಪದಚ್ಯುತಗೊಳ್ಳುವ ಮಸೂದೆಯನ್ನು ಸಂಸತ್ತಿನ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಒಪ್ಪಿಸಿ ಒಂದು ತಿಂಗಳು ಕಳೆದರೂ, ವಿರೋಧ ಪಕ್ಷಗಳ ಅಸಹಕಾರದಿಂದ ಇನ್ನೂ ಸಮಿತಿ ರಚನೆಯಾಗಿಲ್ಲ.

ADVERTISEMENT

ಬ್ಯಾಂಕ್ ದಿವಾಳಿತನ (ತಿದ್ದುಪಡಿ) ಮಸೂದೆ ಹಾಗೂ ಜನ ವಿಶ್ವಾಸ್ (ತಿದ್ದುಪಡಿ) ಮಸೂದೆ–2025 ಅನ್ನು ಸ್ಥಾಯಿ ಸಮಿತಿಗೆ ಒಪ್ಪಿಸಲಾಗಿದ್ದು, ಇನ್ನೂ ಸದಸ್ಯರ ಘೋಷಣೆಯಾಗಿಲ್ಲ. ಈ ಮಸೂದೆಗಳನ್ನು ಕ್ರಮವಾಗಿ ಆಗಸ್ಟ್ 13 ಹಾಗೂ 18 ರಂದು ಸ್ಥಾಯಿ ಸಮಿತಿಗೆ ವಹಿಸಲಾಗಿತ್ತು.

ಜಂಟಿ ಸಂಸದೀಯ ಸಮಿತಿಯಲ್ಲಿ ಲೋಕಸಭೆಯ 21 ಹಾಗೂ ರಾಜ್ಯಸಭೆಯ 10 ಸಂಸದರು ಇರಲಿದ್ದಾರೆ. ಈ ಸಮಿತಿಯು ಮುಂಬರುವ ಅಧಿವೇಶನದ ಮೊದಲ ವಾರದ ಕೊನೆಯ ದಿನದಂದು ವರದಿ ಸಲ್ಲಿಸಬೇಕು ಎಂದು ಗಡುವು ವಿಧಿಸಲಾಗಿದೆ. ಒಂದು ವೇಳೆ ಗಡುವು ವಿಸ್ತರಿಸದಿದ್ದರೆ, ನವೆಂಬರ್ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಅಂತ್ಯಗೊಳ್ಳಲಿದೆ. ಸಂಸತ್ತಿನ ಚಳಿಗಾಗದ ಅಧಿವೇಶನ ನವೆಂಬರ್ ಎರಡನೇ ವಾರದಿಂದ ಆರಂಭವಾಗುವ ಸಾಧ್ಯತೆ ಇದೆ.

ಜಂಟಿ ಸಂಸತ್ ಸಮಿತಿಯಿಂದ ಬಹಿಷ್ಕರಿಸುವುದಾಗಿ ಯಾವುದೇ ಪಕ್ಷಗಳು ಪತ್ರ ಬರೆದಿಲ್ಲ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸೆಪ್ಟೆಂಬರ್ 13 ರಂದು ಬೆಂಗಳೂರಿನಲ್ಲಿ ಹೇಳಿದ್ದಾರೆ. ಸದಸ್ಯರ ಹೆಸರು ನೀಡಬೇಕು ಎಂದು ಪಕ್ಷಗಳಿಗೆ ಸೂಚಿಸಲಾಗಿದ್ದು, ಹೆಸರುಗಳ ಪಟ್ಟಿ ಸ್ವೀಕರಿಸಿದ ಬಳಿಕ ಸಮಿತಿ ರಚಿಸುವುದಾಗಿ ಅವರು ಹೇಳಿದ್ದಾರೆ.

ಜಂಟಿ ಸಂಸತ್ ಸಮಿತಿ ಸದಸ್ಯರ ಪಟ್ಟಿ ಘೋಷಣೆಯಾಗಿರುವುದರ ಬಗ್ಗೆ ಸಂಸತ್ತಿನ ಪ್ರಕಟಣೆಯಲ್ಲಿ ಯಾವುದೇ ಮಾಹಿತಿ ಇಲ್ಲ. ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಶಿವಸೇನಾ (ಯುಟಿಬಿ) ಈಗಾಗಲೇ ಸಮಿತಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿವೆ.

ಸಮಿತಿ ಸೇರುವ ಬಗ್ಗೆ ಕಾಂಗ್ರೆಸ್‌ನಲ್ಲಿ ಎರಡು ಅಭಿಪ್ರಾಯವಿದ್ದು, ವಿರೋಧ ಪಕ್ಷಗಳ ಬಹುಮತದ ನಿರ್ಧಾರದ ಪರವಾಗಿ ಕಾಂಗ್ರೆಸ್ ಇರಬಹುದು ಎನ್ನಲಾಗಿದೆ.

ವಿರೋಧ ಪಕ್ಷಗಳ ನಿರ್ಧಾರವನ್ನು ಬೆಂಬಲಿಸುವುದಾಗಿ ಸಿಪಿಐ(ಎಂ) ಹೇಳಿದ್ದು, ಜೆಪಿಸಿಯನ್ನು ಬಹಿಷ್ಕರಿಸುವುದಾಗಿ ಹೇಳಿರುವ ಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಸರಿಯಾದ ಸಮಯಕ್ಕೆ ಈ ಬಗ್ಗೆ ಚರ್ಚೆಗೆ ಮುನ್ನುಡಿ ಬರೆಯದೆ ಒಮ್ಮತದ ಅಭಿಪ್ರಾಯ ತೆಗೆದುಕೊಳ್ಳಲು ವಿಫಲವಾಗುತ್ತಿರುವುದಕ್ಕೆ ಕಾಂಗ್ರೆಸ್ ವಿರುದ್ಧವೂ ಸಿಪಿಐ(ಎಂ) ಅಸಮಾಧಾನಗೊಂಡಿದೆ.

ನಾವು ಈ ಮಸೂದೆಗಳನ್ನು ವಿರೋಧಿಸುತ್ತೇವೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ ಬೇಬಿ ಹೇಳಿದ್ದಾರೆ. ‘ಉಭಯ ಸದನಗಳಲ್ಲಿ ಇರುವ ಎಲ್ಲಾ ಪಕ್ಷಗಳು ವಿರೋಧ ಪಕ್ಷಗಳ ನಡುವೆ ಸಮನ್ವಯತೆ ಉಂಟು ಮಾಡಲು ಜಾಣತಣ ಹಾಗೂ ಗಂಭೀರತೆ ಪ್ರದರ್ಶಿಸಬೇಕು. ವಿವಿಧ ಕಾರಣಗಳಿಂದ ಸಿ‍‍ಪಿಎಂ ಇದಕ್ಕೆ ನಾಯಕತ್ವ ವಹಿಸುತ್ತಿಲ್ಲ. ಒಮ್ಮತದ ನಿರ್ಧಾರ ತೆಗೆದುಕೊಳ್ಳಲು ನಾವು ವಿವಿಧ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ’ ಎಂದು ಬೇಬಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.