ಲೋಕಸಭೆ ಅಧಿವೇಶನ
ಪ್ರಾತಿನಿಧಿಕ ಚಿತ್ರ
ನವದೆಹಲಿ: ಬಂಧನಕ್ಕೆ ಒಳಗಾಗಿ 30 ದಿನ ಜೈಲಿನಲ್ಲಿದ್ದರೆ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರನ್ನು ಪದಚ್ಯುತಿಗೊಳಿಸುವುದಕ್ಕೆ ಅನುವು ಮಾಡಿಕೊಡುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಎರಡು ವಾರಗಳು ಕಳೆದಿವೆ. ಆದರೆ ಮಸೂದೆಯನ್ನು ಪರಿಶೀಲಿಸಲಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸದಸ್ಯರ ಹೆಸರು ಇನ್ನೂ ಅಂತಿಮಗೊಂಡಿಲ್ಲ.
ವಕ್ಫ್ (ತಿದ್ದುಪಡಿ) ಮಸೂದೆ– 2024 ಮತ್ತು ‘ಒಂದು ರಾಷ್ಟ್ರ–ಒಂದು ಚುನಾವಣೆ’ಗೆ ಸಂಬಂಧಿಸಿದ ಮಸೂದೆಗಳ ಪರಿಶೀಲನೆಗೆ ಜೆಪಿಸಿ ರಚನೆ ಪ್ರಕ್ರಿಯೆ ತ್ವರಿತವಾಗಿ ನಡೆದಿತ್ತು. ಆದರೆ ಈ ಮಸೂದೆಯ ವಿಚಾರದಲ್ಲಿ ಜೆಪಿಸಿ ರಚನೆ ವಿಳಂಬವಾಗಿದೆ.
ಪ್ರಧಾನಿ, ಮುಖ್ಯಮಂತ್ರಿ ಮತ್ತು ಸಚಿವರನ್ನು ಹುದ್ದೆಯಿಂದ ಪದಚ್ಯುತಿಗೊಳಿಸಲು ಸಾಧ್ಯವಾಗುವಂತಹ ಮೂರು ಮಸೂದೆಗಳನ್ನು ಗೃಹ ಸಚಿವ ಅಮಿತ್ ಶಾ ಅವರು ಆಗಸ್ಟ್ 20ರಂದು ಲೋಕಸಭೆಯಲ್ಲಿ ಮಂಡಿಸಿದ್ದರು. ಸಂವಿಧಾನ (130ನೇ ತಿದ್ದುಪಡಿ) ಮಸೂದೆ 2025, ಕೇಂದ್ರಾಡಳಿತ ಸರ್ಕಾರ ತಿದ್ದುಪಡಿ ಮಸೂದೆ, ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆ ತಿದ್ದುಪಡಿ ಮಸೂದೆ– 2025 ಗಳನ್ನು ಪರಿಶೀಲನೆಗೆ ಜೆಪಿಸಿಗೆ ಒಪ್ಪಿಸಲಾಗಿದೆ ಎಂದು ಶಾ ಹೇಳಿದ್ದರು.
ತೃಣಮೂಲ ಕಾಂಗ್ರೆಸ್ (ಟಿಎಂಸಿ), ಸಮಾಜವಾದಿ ಪಾರ್ಟಿ (ಎಸ್‌ಪಿ), ಎಎಪಿ ಮತ್ತು ಶಿವಸೇನಾ (ಯುಬಿಟಿ) ಪಕ್ಷಗಳು ಜೆಪಿಸಿ ಸೇರುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿವೆ. ಈ ಮಸೂದೆ ‘ರಾಜಕೀಯ ಅಸ್ತ್ರ’ವಾಗಿ ಬಳಕೆಯಾಗಬಹುದು ಎಂಬುದು ಈ ಪಕ್ಷಗಳ ಆರೋಪ.
ಜೆಪಿಸಿ ಸೇರುವ ಕುರಿತು ಕಾಂಗ್ರೆಸ್ ಪಕ್ಷ ಇದುವರೆಗೂ ಲೋಕಸಭಾ ಸಚಿವಾಲಯಕ್ಕೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಸಮಿತಿ ಸೇರುವ ಬಗ್ಗೆ ಪಕ್ಷದೊಳಗೆ ಹಾಗೂ ‘ಇಂಡಿಯಾ’ ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯ ಇದೆ. ತನ್ನ ನಿರ್ಧಾರವನ್ನು ಇನ್ನೂ ಬಹಿರಂಗಪಡಿಸದಿರುವ ಆರ್‌ಜೆಡಿಗೆ ಕೂಡ ಸಮಿತಿಗೆ ಸೇರುವ ಇಷ್ಟವಿಲ್ಲ.
ಸಮಿತಿಗೆ ಸೇರಬೇಕೆ ಅಥವಾ ಬೇಡವೇ ಎಂಬ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ಖಚಿತಪಡಿಸಿವೆ. ಪರ–ವಿರೋಧದ ವಾದಗಳನ್ನು ಆಲಿಸಿದ ಬಳಿಕವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಪಕ್ಷದ ಹೈಕಮಾಂಡ್ ನಿರ್ಧರಿಸಿದೆ.
ಸಮಿತಿಗೆ ಸೇರುವುದರಿಂದ ‘ಇಂಡಿಯಾ’ ಮೈತ್ರಿಕೂಟದ ಇತರ ಪಾಲುದಾರರನ್ನು ಕಡೆಗಣಿಸಿದಂತೆ ಆಗುತ್ತದೆ ಎಂಬ ಆತಂಕವೂ ಪಕ್ಷವನ್ನು ಕಾಡುತ್ತಿದೆ. ‘ಪಕ್ಷದೊಳಗೆ ಚರ್ಚೆ ಮುಂದುವರಿದಿದ್ದು, ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.