ADVERTISEMENT

ಗ್ಯಾನವಾಪಿ ಸಮೀಕ್ಷೆಗೆ ಆದೇಶಿಸಿದ್ದ ನ್ಯಾಯಾಧೀಶರಿಗೆ ಬೆದರಿಕೆ ಕರೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 14:07 IST
Last Updated 25 ಏಪ್ರಿಲ್ 2024, 14:07 IST
   

ಬರೇಲಿ: ಉತ್ತರ ಪ್ರದೇಶದ ವಾರಾಣಸಿಯ ಗ್ಯಾನವಾಪಿ ಮಸೀದಿ ಸಂಕೀರ್ಣದಲ್ಲಿ ವಿಡಿಯೊ ಸಮೀಕ್ಷೆ ನಡೆಸಲು 2022ರಲ್ಲಿ ಅನುಮತಿಸಿದ್ದ ಹೆಚ್ಚುವರಿ ಸೆಷನ್ಸ್‌ ನ್ಯಾಯಮೂರ್ತಿ (ತ್ವರಿತ ಗತಿ ನ್ಯಾಯಾಲಯ– 1) ರವಿ ಕುಮಾರ್‌ ದಿವಾಕರ್‌ ಅವರು ತಮಗೆ ಅಪರಿಚಿತ ವಿದೇಶ ಸಂಖ್ಯೆಗಳಿಂದ ಕರೆ ಬರುತ್ತಿವೆ ಎಂದು ದೂರಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. 

‘ನ್ಯಾಯಾಧೀಶ ದಿವಾಕರ್‌ ಅವರು ಪತ್ರ ಬರೆದಿದ್ದಾರೆ. ಅಂತರರಾಷ್ಟ್ರೀಯ ದೂರವಾಣಿ ಸಂಖ್ಯೆಗಳಿಂದ ಕರೆ ಬರುತ್ತಿರುವುದು ತಮ್ಮನ್ನು ಆತಂಕಕ್ಕೆ ದೂಡಿದೆ ಎಂದು ಅವರು ಬರೆದಿದ್ದಾರೆ’ ಎಂದು ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ಘುಲೆ ಸುಶೀಲ್‌ ಚಂದ್ರಭಾನ್‌ ಅವರು ಹೇಳಿದ್ದಾರೆ.

‘ಏಪ್ರಿಲ್‌ 15ರಂದು ಮೊದಲ ಬಾರಿಗೆ ಅಂತರರಾಷ್ಟ್ರೀಯ ಸಂಖ್ಯೆಯಿಂದ ಕರೆ ಬಂದಿತು. ಕರೆಗೆ ಉತ್ತರಿಸಲಿಲ್ಲ. ಇಲ್ಲಿಯವರೆಗೂ ಕರೆ ಬರುತ್ತಲೇ ಇದೆ ಎಂದು ದಿವಾಕರ್‌ ಹೇಳಿದ್ದಾರೆ. ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಸೈಬರ್‌ ಘಟಕ ಮತ್ತು ಕೋತವಾಲಿ ಪೊಲೀಸರಿಗೆ ಸೂಚಿಸಲಾಗಿದೆ’ ಎಂದು ಘುಲೆ ಹೇಳಿದ್ದಾರೆ. 

ADVERTISEMENT

ಗಂಭೀರ ಪ್ರಕರಣಗಳಲ್ಲಿ ಕಠಿಣ ಸಜೆ ವಿಧಿಸುವುದಕ್ಕೆ ದಿವಾರರ್‌ ಅವರು ಹೆಸರಾಗಿದ್ದರು. ಬರೇಲಿಯಲ್ಲಿ ಎಂಟು ಮಂದಿಗೆ ಮರಣದಂಡನೆ ವಿಧಿಸಿದ್ದರು. ಬರೇಲಿ ಗಲಭೆ ಪ್ರಕರಣದಲ್ಲಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಅವರು, ಸಂಚುಕೋರ ಧಾರ್ಮಿಕ ಮುಖಂಡ ತೌಖೀರ್‌ ರಾಜಾಗೆ ಸಮನ್ಸ್‌ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.