ತಿರುವನಂತಪುರ: ಕೇರಳದ ಒಬ್ಬ ನ್ಯಾಯಾಂಗ ಅಧಿಕಾರಿ ಮತ್ತು ಒಬ್ಬ ಐಪಿಎಸ್ ಅಧಿಕಾರಿ ಪ್ರತ್ಯೇಕ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ತನಿಖೆ ಎದುರಿಸುತ್ತಿದ್ದಾರೆ.
ಕೊಲ್ಲಂ ಜಿಲ್ಲೆಯ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ವಿ. ಉದಯಕುಮಾರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮರಿನ್ ಜೋಸೆಫ್ ತನಿಖೆ ಎದುರಿಸುತ್ತಿರುವ ಅಧಿಕಾರಿಗಳು.
ನ್ಯಾಯಾಧೀಶ ಉದಯಕುಮಾರ್ ಅವರು ತಮ್ಮ ಕೊಠಡಿಯಲ್ಲಿ ಲೈಂಗಿಕ ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಮಹಿಳಾ ಅರ್ಜಿದಾರರೊಬ್ಬರು ದೂರು ನೀಡಿದ್ದಾರೆ. ಈ ಸಂಬಂಧ ಕೇರಳ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ವಿಚಾರಣೆಗೆ ಆದೇಶಿಸಿದೆ. ಅಲ್ಲದೆ ಆ ನ್ಯಾಯಾಧೀಶರನ್ನು ಕೊಲ್ಲಂನ ಮೋಟಾರು ಅಪಘಾತಗಳ ಕ್ಲೇಮು ನ್ಯಾಯಮಂಡಳಿಗೆ ವರ್ಗಾಯಿಸಿದೆ.
ಐಪಿಎಸ್ ಅಧಿಕಾರಿ ಮರಿನ್ ಜೋಸೆಫ್ ಅವರು ಲೈಂಗಿಕ ಸ್ವರೂಪದ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿ ಇಬ್ಬರು ಮಹಿಳಾ ಸಬ್– ಇನ್ಸ್‌ಪೆಕ್ಟರ್‌ಗಳು (ಎಸ್‌ಐ) ದೂರು ನೀಡಿದ್ದಾರೆ. ದಾಖಲೆಗಳನ್ನು ಗಮನಿಸಿದರೆ ಆರೋಪಗಳು ಮೇಲ್ನೋಟಕ್ಕೆ ಸತ್ಯ ಎಂದು ಕಂಡು ಬಂದಿವೆ. ಇದರ ಬೆನ್ನಲ್ಲೇ, ರಾಜ್ಯ ಪೊಲೀಸ್ ಮುಖ್ಯಸ್ಥ ರಾವದಾ ಚಂದ್ರಶೇಖರ್ ಅವರು ತನಿಖೆಗೆ ಆದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.