ತಿರುವನಂತಪುರ: 2023ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಶುಕ್ರವಾರ ಘೋಷಣೆಯಾಗಿವೆ. ವಿವಾದಾತ್ಮಕ ಸಿನಿಮಾ 'ದಿ ಕೇರಳ ಸ್ಟೋರಿ'ಯ ಸುದಿಪ್ತೋ ಸೇನ್ ಅವರಿಗೆ 'ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ' ನೀಡಿರುವುದಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಿಡಿಕಾರಿದ್ದಾರೆ.
'ಕೋಮುವಾದವನ್ನು ಪ್ರಚೋದಿಸಲು ಹಾಗೂ ಕೇರಳಕ್ಕೆ ಅವಹೇಳನ ಮಾಡಲು ಪ್ರಯತ್ನಿಸಿದ ಸಿನಿಮಾವನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ, ರಾಷ್ಟ್ರೀಯ ಸಮಗ್ರತೆ ಮತ್ತು ಕೋಮು ಸಾಮರಸ್ಯಕ್ಕೆ ಹೆಸರಾದ ಭಾರತೀಯ ಸಿನಿಮಾ ರಂಗವನ್ನು ತೀರ್ಪುಗಾರರು ಅವಮಾನಿಸಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕೋಮುವಾದವನ್ನು ಹರಡಲೆತ್ನಿಸುವ ಕಾರ್ಯಸೂಚಿಗೆ ಕಲೆಯನ್ನು ಬಳಸುವುದರ ವಿರುದ್ಧ ಬಲವಾದ ಪ್ರತಿಭಟನೆಗೆ ಅವರು ಕರೆ ನೀಡಿದ್ದಾರೆ.
'ದಿ ಕೇರಳ ಸ್ಟೋರಿ' ಸಿನಿಮಾ 2023ರಲ್ಲಿ ತೆರೆಕಂಡಿತ್ತು. ರಾಜ್ಯದ ಸುಮಾರು 32,000 ಮಹಿಳೆಯರನ್ನು ಮತಾಂತರಗೊಳಿಸಿ, ಭಯೋತ್ಪಾದನಾ ಸಂಘಟನೆಗೆ ಸೇರಿಸಲಾಗಿದೆ ಎಂದು ಅದರ ಟೀಸರ್‌ನಲ್ಲಿ ಉಲ್ಲೇಖಿಸಲಾಗಿತ್ತು. ಅದಾದ ನಂತರ ಕೇರಳದಾದ್ಯಂತ ಭಾರಿ ಪ್ರತಿಭಟನೆಗಳು ನಡೆದಿದ್ದವು.
ಶಾರುಕ್, ವಿಕ್ರಾಂತ್‌ಗೆ ‘ಆತ್ಯುತ್ತಮ ನಟ’ ಪ್ರಶಸ್ತಿ
ಬಾಲಿವುಡ್ ನಟ ಶಾರುಕ್ ಖಾನ್ ಮತ್ತು ವಿಕ್ರಾಂತ್ ಮೇಸಿ ಅವರು ‘ಆತ್ಯುತ್ತಮ ನಟ’ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
ಶಾರುಕ್ ಅವರು ತಮ್ಮ 37 ವರ್ಷಗಳ ವೃತ್ತಿಜೀವನದಲ್ಲಿ ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿರುವುದು ಇದೇ ಮೊದಲು. ‘ಜವಾನ್’ ಚಿತ್ರದ ಅಭಿನಯಕ್ಕಾಗಿ ಅವರಿಗೆ ಈ ಗೌರವ ಸಂದಿದೆ. ವಿಕ್ರಾಂತ್ ಅವರು ‘ಟ್ವೆಲ್ತ್ ಫೇಲ್’ ಚಿತ್ರದ ಅಭಿನಯಕ್ಕೆ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
‘ಮಿಸ್ಟ್ರೆಸ್ ಚಟರ್ಜಿ ವರ್ಸಸ್ ನಾರ್ವೆ’ ಚಿತ್ರದ ಅಭಿನಯಕ್ಕಾಗಿ ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರು ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.