ನವದೆಹಲಿ: ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆಗಾಗಿ ಮೂವರು ಸದಸ್ಯರ ಸಮಿತಿಯನ್ನು ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಮಂಗಳವಾರ ರಚಿಸಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಣಿಂದರ್ ಮೋಹನ್ ಶ್ರೀವಾಸ್ತವ ಮತ್ತು ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲ ಬಿ.ವಿ. ಆಚಾರ್ಯ ಅವರು ಸಮಿತಿಯ ಸದಸ್ಯರಾಗಿರುವರು. ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಪದವೀಧರ ಆಗಿರುವ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರು ಈ ಹಿಂದೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಆಗಿದ್ದರು.
ವರ್ಮಾ ಅವರನ್ನು ಪದಚ್ಯುತಗೊಳಿಸಬೇಕೆಂದು ಸಂಸದರು ಸಲ್ಲಿಸಿದ ನೋಟಿಸ್ ಆಧರಿಸಿ ಓಂ ಬಿರ್ಲಾ ಅವರು ಈ ತೀರ್ಮಾನಕ್ಕೆ ಬಂದಿದ್ದಾರೆ. ʼಸಮಿತಿಯು ಶೀಘ್ರದಲ್ಲಿ ವರದಿ ಸಲ್ಲಿಸಲಿದೆ. ನ್ಯಾಯಮೂರ್ತಿ ವರ್ಮಾ ಅವರನ್ನು ಪದಚ್ಯುತಗೊಳಿಸುವ ಪ್ರಸ್ತಾವನೆಯು ತನಿಖಾ ಸಮಿತಿಯ ವರದಿಯನ್ನು ಸ್ವೀಕರಿಸುವವರೆಗೆ ಬಾಕಿ ಇರಲಿದೆʼ ಎಂದು ಓಂ ಬಿರ್ಲಾ ಹೇಳಿದರು.
ʼನ್ಯಾಯಮೂರ್ತಿಗಳ ವಿಚಾರಣಾ ಕಾಯ್ದೆ ಸೆಕ್ಷನ್ 3ರ ಹಾಗೂ ಸಂವಿಧಾನದ 124, 217 ಮತ್ತು 218ನೇ ವಿಧಿಗಳ ಅಡಿಯಲ್ಲಿ ನ್ಯಾ. ವರ್ಮಾ ಅವರನ್ನು ಪದಚ್ಯುತಗೊಳಿಸುವಂತೆ ಆಗ್ರಹಿಸಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಬಿಜೆಪಿ ಸಂಸದ ರವಿಶಂಕರ ಪ್ರಸಾದ್ ಸೇರಿದಂತೆ 146 ಸಂಸದರಿಂದ ಪದಚ್ಯುತಿಯ ಪ್ರಸ್ತಾವನೆ ಜುಲೈ 21ರಂದು ಸಲ್ಲಿಕೆಯಾಗಿತ್ತುʼ ಎಂದು ಅವರು ತಿಳಿಸಿದರು.
ಬೆಂಕಿ ಅವಘಡದ ನಂತರ ವರ್ಮಾ ಅವರ 30 ತುಘಲಕ್ ಕ್ರೆಸೆಂಟ್ ಬಂಗಲೆಯಲ್ಲಿ ಲೆಕ್ಕವಿಲ್ಲದ ನಗದು ಪತ್ತೆಯಾಗಿದೆ ಎಂದು ಬಿರ್ಲಾ ಸದನಕ್ಕೆ ತಿಳಿಸಿದರು.
‘ಪ್ರಸ್ತುತ ಪ್ರಕರಣದಲ್ಲಿರುವ ಸಂಗತಿಗಳು ಭ್ರಷ್ಟಾಚಾರದ ಕಡೆಗೆ ಬೆರಳು ತೋರಿಸುತ್ತವೆ ಮತ್ತು ಸಂವಿಧಾನದ 124, 217 ಮತ್ತು 218ನೇ ವಿಧಿಗಳ ಅಡಿಯಲ್ಲಿ ಕ್ರಮಕ್ಕೆ ಅರ್ಹವಾಗಿವೆ. ಸಂಸತ್ತು ಈ ವಿಷಯದ ಬಗ್ಗೆ ಏಕ ಧ್ವನಿಯಲ್ಲಿ ಮಾತನಾಡಬೇಕಾಗಿದೆ. ಈ ದೇಶದ ಪ್ರತಿಯೊಬ್ಬರೂ ಭ್ರಷ್ಟಾಚಾರದ ವಿರುದ್ಧದ ಶೂನ್ಯ ಸಹಿಷ್ಣುತೆಯ ಸ್ಪಷ್ಟ ಸಂದೇಶ ಕಳುಹಿಸಬೇಕಿದೆʼ ಎಂದು ಅವರು ಹೇಳಿದರು.
ವರ್ಮಾ ಅವರ ನಿವಾಸದಲ್ಲಿ 2025ರ ಮಾರ್ಚ್ 14ರಂದು ರಾತ್ರಿ ಬೆಂಕಿ ಅವಘಡ ಸಂಭವಿಸಿತ್ತು. ಈ ವೇಳೆ ನಗದು ಪತ್ತೆಯಾದ ಆರೋಪಗಳು ಕೇಳಿಬಂದಿದ್ದು, ಈ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಮಾ.22ರಂದು ಆಗಿನ ಸಿಜೆಐ ಸಂಜೀವ್ ಖನ್ನಾ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿದ್ದರು. ಸಮಿತಿಯು 55 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿ, ಘಟನಾ ಸ್ಥಳಕ್ಕೆ ಭೇಟಿ ನೀಡಿ 64 ಪುಟಗಳ ವರದಿ ಸಲ್ಲಿಸಿತ್ತು. ವರ್ಮಾ ವಿರುದ್ಧದ ಆರೋಪಗಳು ಸಾಬೀತಾಗಿದ್ದು, ಅವರನ್ನು ಸೇವೆಯಿಂದ ತೆಗೆದುಹಾಕುವಂತೆ ಸಮಿತಿ ಶಿಫಾರಸು ಮಾಡಿತ್ತು. ವರ್ಮಾ ಅವರನ್ನು ಪದಚ್ಯುತಗೊಳಿಸುವ ಪ್ರಕ್ರಿಯೆ ಆರಂಭಿಸುವಂತೆ ಸಂಜೀವ್ ಖನ್ನಾ ಶಿಫಾರಸು ಮಾಡಿದ್ದರು.
ವಿವಾದದ ಬೆನ್ನಲ್ಲೇ ನ್ಯಾಯಮೂರ್ತಿ ವರ್ಮಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು.
ತನಿಖಾ ವರದಿ ಅನೂರ್ಜಿತಗೊಳಿಸುವಂತೆ ಕೋರಿ ನ್ಯಾಯಮೂರ್ತಿ ವರ್ಮಾ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ವಜಾಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.