ADVERTISEMENT

ಕಾಶ್ಮೀರಿ ಪಂಡಿತರು ಕಣಿವೆ ತೊರೆಯಬೇಕೆಂದು ಉಗ್ರರು ಬಯಸುತ್ತಿದ್ದಾರೆ: ಐಜಿಪಿ

ಜುಲ್ಫಿಕರ್ ಮಜಿದ್
Published 17 ಮೇ 2022, 13:54 IST
Last Updated 17 ಮೇ 2022, 13:54 IST
ಕಾಶ್ಮೀರ ಐಜಿಪಿ ವಿಜಯ್ ಕುಮಾರ್ – ಪಿಟಿಐ ಚಿತ್ರ
ಕಾಶ್ಮೀರ ಐಜಿಪಿ ವಿಜಯ್ ಕುಮಾರ್ – ಪಿಟಿಐ ಚಿತ್ರ   

ಶ್ರೀನಗರ: ಕಾಶ್ಮೀರಿ ಪಂಡಿತರನ್ನು ಹೇಗಾದರೂ ಮಾಡಿ ಕಣಿವೆ ತೊರೆಯುವಂತೆ ಮಾಡಲು ಉಗ್ರರು ಹಾಗೂ ಗಡಿಯಲ್ಲಿ ಅವರಿಗೆ ಬೆಂಬಲ ನೀಡುವವರು ಸಂಚು ಹೂಡುತ್ತಿದ್ದಾರೆ. ಅದನ್ನು ಸಫಲವಾಗಲು ಬಿಡುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿದ್ದಾರೆ.

ಶೇಖ್‌ಪೊರ, ಬುಡ್ಗಾಂ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾಶ್ಮೀರಿ ಪಂಡಿತ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಕಾಶ್ಮೀರ ಐಜಿಪಿ ವಿಜಯ್ ಕುಮಾರ್, ಭದ್ರತೆಯಲ್ಲಿನ ಲೋಪವನ್ನು ಶೀಘ್ರವೇ ಸರಿಪಡಿಸುತ್ತೇವೆ. ಕಣಿವೆಯಿಂದ ಭಯೋತ್ಪಾದನೆಯನ್ನು ತೊಡೆದುಹಾಕುತ್ತೇವೆ ಎಂದು ಭರವಸೆ ನೀಡಿದ್ದಾರೆ.

‘ನಿಮ್ಮನ್ನು ಕಣಿವೆ ಬಿಟ್ಟು ತೆರಳುವಂತೆ ಮಾಡಬೇಕು ಎಂಬುದೇ ಭಯೋತ್ಪಾದಕರ ಮತ್ತು ಅವರಿಗೆ ಕುಮ್ಮಕ್ಕು ನೀಡುತ್ತಿರುವವರ ಸಂಚು. ಯಾವುದೇ ಕಾರಣಕ್ಕೂ ಅದನ್ನು ಯಶಸ್ವಿಯಾಗಲು ಬಿಡಬಾರದು. ನೀವು ಕಣಿವೆ ಬಿಟ್ಟು ತೆರಳಬಾರದು’ ಎಂದು ಅವರು ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ಹೆಚ್ಚಿನ ಭದ್ರತೆ ನೀಡಲಾಗುವುದು ಎಂದೂ ಅವರು ಆಶ್ವಾಸನೆ ನೀಡಿದ್ದಾರೆ.

ಮೇ 12ರಂದು ಮಧ್ಯ ಕಾಶ್ಮೀರದ ಬುಡ್ಗಾಂ ಜಿಲ್ಲೆಯ ಚದೂರ ತಹಶೀಲ್‌ ಕಚೇರಿಗೆ ನುಗ್ಗಿ ಕಂದಾಯ ಇಲಾಖೆ ನೌಕರ ರಾಹುಲ್‌ ಭಟ್‌ ಅವರನ್ನು ಇಬ್ಬರು ಪಾಕಿಸ್ತಾನಿ ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದರು. ಹತ್ಯೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.