ADVERTISEMENT

ಕಲಬುರ್ಗಿ ಹತ್ಯೆ: ತಪ್ಪಿಸಿಕೊಂಡಿದ್ದಾರೆ ಇಬ್ಬರು ಪ್ರಮುಖ ಆರೋಪಿಗಳು–ಎಸ್‌ಐಟಿ ವರದಿ

ಪಿಟಿಐ
Published 17 ಜನವರಿ 2020, 13:28 IST
Last Updated 17 ಜನವರಿ 2020, 13:28 IST
ಕಲಬುರ್ಗಿ
ಕಲಬುರ್ಗಿ   

ನವದೆಹಲಿ: ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರನ್ನು ಗುಂಡಿಟ್ಟು ಹತ್ಯೆಗೈದಿದ್ದ ಪ್ರಮುಖ ಆರೋಪಿಗಳಲ್ಲಿ ಇಬ್ಬರು ತಪ್ಪಿಸಿಕೊಂಡಿದ್ದಾರೆ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಸುಪ್ರೀಂಕೋರ್ಟ್‌ಗೆ ಶುಕ್ರವಾರ ವರದಿ ನೀಡಿದೆ.

ನ್ಯಾಯಮೂರ್ತಿ ರೋಹಿಂಗ್ಟನ್ ನಾರಿಮನ್ ನೇತೃತ್ವದ ಪೀಠಕ್ಕೆ ತನಿಖೆಯ ಪ್ರಸ್ತುತ ಸ್ಥಿತಿಯ ಬಗ್ಗೆಎಸ್‌ಐಟಿ ವರದಿ ನೀಡಿದ್ದು,‘ತನಿಖೆ ಪೂರ್ಣಗೊಂಡಿದ್ದು, ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ’ ಎಂದು ತಿಳಿಸಿದೆ.

‘ಎಸ್‌ಐಟಿ ನೀಡಿದ ವರದಿಯನ್ನು ಪರಿಶೀಲಿಸಿದ್ದು, ಇಬ್ಬರು ಪ್ರಮುಖ ಆರೋಪಿಗಳು ತಪ್ಪಿಸಿಕೊಂಡಿದ್ದು, ಇನ್ನೂ ಪತ್ತೆಯಾಗಿಲ್ಲ ಎಂದು ಅದರಲ್ಲಿದೆ. ಜೊತೆಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಪ್ರಕರಣ ಸೆಷನ್‌ ನ್ಯಾಯಾಲಯದಲ್ಲಿದೆ ಎಂಬ ಬಗ್ಗೆಯೂ ಅದರಲ್ಲಿ ವಿವರಿಸಲಾಗಿದೆ’ ಎಂದು ಪೀಠ ಹೇಳಿದೆ.

‘ಈ ಪ್ರಕರಣದ ಮೇಲ್ವಿಚಾರಣೆಯನ್ನು ಈಗಾಗಲೇ ಕರ್ನಾಟಕ ಹೈಕೋರ್ಟ್‌ಗೆ ವಹಿಸಿಕೊಡಲಾಗಿದ್ದು, ಮತ್ತೆ ಈ ಮನವಿಯ ವಿಚಾರಣೆ ನಡೆಸುವುದರಲ್ಲಿ ಹುರುಳಿಲ್ಲ’ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ADVERTISEMENT

‘ಕಲಬುರ್ಗಿ ಅವರ ಹತ್ಯೆ ನಡೆದು ಎರಡು ವರ್ಷ ಕಳೆದರೂ ಕರ್ನಾಟಕದ ಸಿಐಡಿ ನಡೆಸುತ್ತಿರುವ ತನಿಖೆಯಲ್ಲಿ ಯಾವುದೇ ರೀತಿಯ ಪ್ರಗತಿ ಕಂಡುಬಂದಿಲ್ಲ. ಹಾಗಾಗಿ, ಪ್ರಕರಣದ ತನಿಖೆಯ ಮೇಲ್ವಿಚಾರಣೆಯನ್ನು ನ್ಯಾಯಾಲಯಕ್ಕೆ ವಹಿಸಬೇಕು’ ಎಂದು ಉಮಾದೇವಿ ಅವರು 2017ರಲ್ಲಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

2019ರ ಫೆಬ್ರುವರಿಯಲ್ಲಿ ಈ ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ನಡೆಸಿರುವ ಎಸ್ಐಟಿಗೆ ಒಪ್ಪಿಸಲು ಸೂಚಿಸಿತ್ತು ಮತ್ತು ತನಿಖೆಯ ಮೇಲ್ವಿಚಾರಣೆಯನ್ನು ಧಾರವಾಡದ ಹೈಕೋರ್ಟ್ ಪೀಠಕ್ಕೆ ವಹಿಸಿ ಆದೇಶಿಸಿತ್ತು.

ಧಾರವಾಡದ ಕಲ್ಯಾಣ ನಗರದಲ್ಲಿರುವ ಅವರ ಮನೆಯಲ್ಲಿ 2015ರ ಆ.30ರಂದು ಕಲಬುರ್ಗಿ ಹತ್ಯೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.