ADVERTISEMENT

ರಾವತ್‌- ರನೋಟ್‌ ನಡುವಿನ ಜಗಳದಲ್ಲಿ ಟ್ರೆಂಡ್‌ ಆದಳು 'ಮುಂಬಾ ದೇವಿ'

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಸೆಪ್ಟೆಂಬರ್ 2020, 11:49 IST
Last Updated 7 ಸೆಪ್ಟೆಂಬರ್ 2020, 11:49 IST
ನಟಿ ಕಂಗನಾ ರನೋಟ್‌ ಮತ್ತು ಶಿವಸೇನೆ ನಾಯಕ ಸಂಜಯ್‌ ರಾವತ್‌
ನಟಿ ಕಂಗನಾ ರನೋಟ್‌ ಮತ್ತು ಶಿವಸೇನೆ ನಾಯಕ ಸಂಜಯ್‌ ರಾವತ್‌   

ಮುಂಬೈ: ಶಿವಸೇನಾ ಮುಖಂಡ ಸಂಜಯ್‌ ರಾವತ್‌ ಮತ್ತು ಬಾಲಿವುಡ್‌ ನಟಿ ಕಂಗನಾ ರನೋಟ್‌ ನಡುವಿನ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿರುವ ಬೆನ್ನಲ್ಲೇ ಟ್ವಿಟರ್‌ನಲ್ಲಿ 'ಮುಂಬಾ ದೇವಿ' ಟ್ರೆಂಡ್‌ ಆಗಿದ್ದಾಳೆ.

ಸಂಜಯ್ ರಾವತ್‌ ಅವರ ಮನಸ್ಥಿತಿಯನ್ನು 'ಮಹಿಳಾ ವಿರೋಧಿ' ಎಂದು ನಟಿ ಕಂಗನಾ ರನೋಟ್‌ ಕರೆದಿದ್ದರು. ಅದಕ್ಕೇ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಸಂಜಯ್‌ ರಾವತ್‌, 'ಶಿವಸೇನೆಯು ಮಹಿಳೆಯರನ್ನು ಗೌರವಿಸುತ್ತದೆ. ಈ ಬಗ್ಗೆ ತಪ್ಪು ಮಾಹಿತಿ ಹರಡುವವರು ಮುಂಬೈ ನಗರದ ದೇವತೆಯಾದ ಮುಂಬಾ ದೇವಿಯನ್ನು ಅವಮಾನಿಸಿದ್ದಾರೆ' ಎಂದು ತಿಳಿಸಿದ್ದಾರೆ.

'ಶ್ರೇಷ್ಠ ಹಿಂದುತ್ವ ನಾಯಕರಾದ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಮಹಾರಾಣಾ ಪ್ರತಾಪ್ ಅವರ ಸಿದ್ಧಾಂತವನ್ನು ಶಿವಸೇನೆ ಅನುಸರಿಸುತ್ತದೆ. ಅವರು ಮಹಿಳೆಯರನ್ನು ಗೌರವಿಸಲು ನಮಗೆ ಕಲಿಸಿಕೊಟ್ಟಿದ್ದಾರೆ. ಆದರೆ, ಕೆಲವರು ದುರುದ್ದೇಶದಿಂದ ಶಿವಸೇನೆ ಮಹಿಳೆಯರನ್ನು ಅವಮಾನಿಸಿದೆ ಎಂಬ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಈ ಆರೋಪಗಳನ್ನು ಮಾಡುವವರು ಮುಂಬೈ ಮತ್ತು ಮುಂಬಾ ದೇವಿಯನ್ನು ಅವಮಾನಿಸಿದ್ದಾರೆ. ಶಿವಸೇನೆ ಮಹಿಳೆಯರ ಆತ್ಮಗೌರವಕ್ಕಾಗಿ ಹೋರಾಡುತ್ತಲೇ ಇರುತ್ತದೆ. ಇದನ್ನೇ ಮಹಾನ್ ಶಿವಸೇನೆ ನಾಯಕ (ಬಾಳಾ ಠಾಕ್ರೆ) ನಮಗೆ ಕಲಿಸಿದ್ದಾರೆ' ಎಂದು ಸಂಜಯ್‌ ರಾವತ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಸಂಜಯ್‌ ರಾವತ್‌ ಅವರು ತಮ್ಮ ಟ್ವೀಟ್‌ನಲ್ಲಿ ಮುಂಬಾ ದೇವಿಯ ಬಗ್ಗೆ ಬರೆದುಕೊಂಡ ನಂತರ ಟ್ವಿಟರ್‌ನಲ್ಲಿ #MumbaDevi ಎಂಬ ಹ್ಯಾಶ್‌ಟ್ಯಾಗ್‌ ಟ್ರೆಂಡ್‌ ಆಗುತ್ತಿದೆ.

'ಸಂಜಯ್‌ ರಾವತ್‌ ಅವರೇ, ಕಂಗನಾ ಮುಂಬೈ ಆಡಳಿತವನ್ನು ಟೀಕಿಸಿದ್ದಾರೆಯೇ ಹೊರತು ಮುಂಬಾ ದೇವಿಯನ್ನಲ್ಲ' ಎಂದು ಕೆಲವರು ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.

'ನಿಮ್ಮ ಕ್ಷುಲ್ಲಕ ರಾಜಕಾರಣಕ್ಕೆ ಶಿವಾಜಿ ಮಹಾರಾಜ್‌, ಮಹಾರಾಣಾ ಪ್ರತಾಪ್, ಮುಂಬಾ ದೇವಿಯ ಹೆಸರನ್ನೇಕೆ ಬಳಸಿಕೊಳ್ಳುತ್ತಿದ್ದೀರಿ' ಎಂದು ರಾವತ್‌ ಅವರನ್ನು ಕೆಲವರು ಪ್ರಶ್ನಿಸಿದ್ದಾರೆ.

ಮುಂಬಾ ದೇವಿ ಬಗೆಗಿನ ಕೆಲ ಟ್ವೀಟ್‌ಗಳು ಇಲ್ಲಿವೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.