ಹಿಮಾಚಲ ಪ್ರದೇಶದ ಮನಾಲಿಗೆ ಭೇಟಿ ನೀಡಿದ ಸಂಸದೆ ಕಂಗನಾ ರನೌತ್
ಶಿಮ್ಲಾ: ಪ್ರವಾಹದ ಹೊಡೆತಕ್ಕೆ ಸಿಲುಕಿ ನಲುಗಿರುವ ಹಿಮಾಚಲ ಪ್ರದೇಶದ ಮನಾಲಿಗೆ ಸಂಸದೆ, ಬಾಲಿವುಡ್ ನಟಿ ಕಂಗನಾ ರನೌತ್ ಭೇಟಿ ನೀಡಿದ್ದರು. ಈ ವೇಳೆ ‘ವಾಪಸ್ ಹೋಗಿ ಕಂಗನಾ, ನೀವು ತಡವಾಗಿ ಬಂದಿದ್ದೀರಿ’ ಎನ್ನುವ ಘೋಷಣೆಗಳನ್ನು ಅಲ್ಲಿನ ಜನ ಕೂಗಿದ್ದಾರೆ.
ಕಂಗನಾ ಬರುತ್ತಿದ್ದಂತೆ ಸ್ಥಳೀಯರು ಕಪ್ಪು ಬಾವುಟ ಹಿಡಿದು, ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದಿತು.
ಮಹಿಳೆಯೊಬ್ಬರು ಪ್ರವಾಹದಿಂದಾದ ನಷ್ಟದ ಬಗ್ಗೆ ಹೇಳಿಕೊಳ್ಳುತ್ತಿದ್ದರೆ ಕಂಗನಾ ಮಾತ್ರ, ‘ಇಲ್ಲಿ ನನ್ನದೂ ರೆಸ್ಟೋರೆಂಟ್ ಇದೆ, ನಿನ್ನೆ ಒಂದು ದಿನ ಕೇವಲ ₹50 ವ್ಯಾಪಾರವಾಗಿದೆ. ನಾನು ಅಲ್ಲಿರುವ ಉದ್ಯೋಗಿಗಳಿಗೆ ₹15 ಲಕ್ಷ ಪಾವತಿಸುತ್ತೇನೆ. ದಯವಿಟ್ಟು ನನ್ನ ನೋವನ್ನೂ ಅರ್ಥಮಾಡಿಕೊಳ್ಳಿ, ನಾನು ಮನುಷ್ಯಳು’ ಎಂದು ಪ್ರತಿಕ್ರಿಯಿಸಿದ್ದಾರೆ.
ಕ್ಷೇತ್ರದ ಸಂಸದೆಯಾಗಿ ಕಂಗನಾ ಅವರ ಪ್ರತಿಕ್ರಿಯೆ ಸ್ಥಳೀಯರನ್ನು ಕೆರಳಿಸಿದೆ. ಸದ್ಯ ಕಂಗನಾ ಅವರು ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಆ.25, 26ರಂದು ಹಿಮಾಚಲ ಪ್ರದೇಶದ ಕುಲು, ಮನಾಲಿ ಪ್ರದೇಶಗಳಲ್ಲಿ ಭಾರಿ ಮಳೆ ಸುರಿದ ಪರಿಣಾಮ ಪ್ರವಾಹ ಸ್ಥಿತಿ ಎದುರಾಗಿತ್ತು. ಬಿಯಾಸ್ ನದಿ ಅಪಾಯ ಮಟ್ಟ ಮೀರಿ ಹರಿದ ಪರಿಣಾಮ ಬಹುಅಂತಸ್ತಿನ ಹೋಟೆಲ್ ಸೇರಿ ನಾಲ್ಕು ಅಂಗಡಿಗಳು ಕೊಚ್ಚಿ ಹೋಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.