ADVERTISEMENT

ಸಿಎಂ ಉದ್ಧವ್ ಠಾಕ್ರೆ ಉದ್ದೇಶಿಸಿ ಕಂಗನಾ ವಿಡಿಯೊ; ಕ್ರೌರ್ಯಕ್ಕೆ 'ಧನ್ಯವಾದ'!

ಏಜೆನ್ಸೀಸ್
Published 9 ಸೆಪ್ಟೆಂಬರ್ 2020, 15:14 IST
Last Updated 9 ಸೆಪ್ಟೆಂಬರ್ 2020, 15:14 IST
ನಟಿ ಕಂಗನಾ ರನೋಟ್‌
ನಟಿ ಕಂಗನಾ ರನೋಟ್‌    

ಮುಂಬೈ: ಬಾಂದ್ರಾದ ಪಾಲಿ ಹಿಲ್ಸ್‌ನಲ್ಲಿರುವ ಕಂಗನಾ ರನೋಟ್‌ ಅವರ ಬಂಗಲೆಯ ಆವರಣದಲ್ಲಿ ಅನುಮತಿ ಪಡೆಯದೇ ಅನೇಕ ಮಾರ್ಪಾಡುಗಳನ್ನು ಮಾಡಿದ್ದಾರೆ ಎಂದು ನೋಟಿಸ್‌ ನೀಡಿದ್ದ ಬೃಹನ್ಮುಂಬಯಿ ಮಹಾನಗರ ಪಾಲಿಕೆಗೆ (ಬಿಎಂಸಿ) ಬುಧವಾರ ಒಂದು ಭಾಗದ ಕಟ್ಟಡ ಕೆಡವಿದೆ. ಕಂಗನಾ ಅದರ ವಿಡಿಯೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

'ಮುಂಬೈ ಈಗ ಪಿಒಕೆ ಆಗಿದೆ' ಎಂದು ಪ್ರತಿಕ್ರಿಯಿಸಿರುವ ಅವರು, ತಮ್ಮ ಮನೆಯಲ್ಲಿ ಕಾನೂನು ಬಾಹಿರವಾಗಿ ಯಾವುದೇ ನಿರ್ಮಾಣ ನಡೆಸಲಾಗಿಲ್ಲ ಎಂದಿದ್ದಾರೆ. ಕಂಗನಾ ಸಲ್ಲಿಸಲಾದ ಅರ್ಜಿ ಮೇರೆಗೆ ಬಂಗಲೆ ಕೆಡವದಂತೆ ಬಾಂಬೆ ಹೈಕೋರ್ಟ್‌ ಬಿಎಂಸಿಗೆ ಸೂಚಿಸಿದೆ.

ಕಟ್ಟಡ ಕೆಡವಿರುವ ವಿಡಿಯೊಗಳ ಜೊತೆಗೆ ಅವರು ಪ್ರಜಾಪ್ರಭುತ್ವದ ಸಾವು (#DeathofDemocracy) ಎಂಬರ್ಥದಲ್ಲಿ ಟ್ಯಾಗ್‌ ಪ್ರಕಟಿಸಿದ್ದಾರೆ. ಸೋದರಿ ರಂಗೋಲಿ ಜೊತೆಗೆ ಕಂಗನಾ ಬುಧವಾರ ಮುಂಬೈಗೆ ಬಂದಿದ್ದಾರೆ. ಅವರಿಗೆ ಕೇಂದ್ರದ ವೈ ಪ್ಲಸ್‌ ಭದ್ರತೆ ನೀಡಲಾಗಿದೆ.

ADVERTISEMENT

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಉದ್ದೇಶಿಸಿ ಕಂಗನಾ ವಿಡಿಯೊ ಸಂದೇಶ ಪ್ರಕಟಿಸಿದ್ದು, ತೋರಿರುವ ಕ್ರೌರ್ಯಕ್ಕೆ 'ಧನ್ಯವಾದಗಳು' ಎಂದಿದ್ದಾರೆ. ತಮ್ಮ ಮನೆಯನ್ನು ಮುರಿದಿರುವಂತೆ ಅವರ ಅಹಂಕಾರವೂ ಮುರಿದು ಬೀಳಲಿದೆ ಎಂದು ಹೇಳಿದ್ದಾರೆ. ತನ್ನ ಪಾಡನ್ನು ಕಾಶ್ಮೀರಿ ಪಂಡಿತರ ಅವಸ್ಥೆಗೆ ಹೋಲಿಸಿ ಕೊಂಡಿದ್ದಾರೆ. ಅಯೋಧ್ಯೆ ಬಗೆಗೆ ಮಾತ್ರವಲ್ಲದೇ ಕಾಶ್ಮೀರದ ಕುರಿತೂ ಸಿನಿಮಾ ಮಾಡುವುದಾಗಿ ಕಂಗನಾ ಹೇಳಿದ್ದಾರೆ.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್‌ ಬಿಎಂಸಿ ನಡೆಸಿರುವ ಕಾರ್ಯವನ್ನು ಟೀಕಿಸಿ ಮಾತನಾಡಿರುವ ವಿಡಿಯೊವನ್ನು ಕಂಗನಾ ಹಂಚಿಕೊಂಡಿದ್ದಾರೆ. 'ಮಹಾರಾಷ್ಟ್ರದ ಇತಿಹಾಸದಲ್ಲಿ ಇಂಥದ್ದು ನಡೆದಿರಲಿಲ್ಲ' ಎಂದು ಫಡಣವಿಸ್‌ ಹೇಳಿದ್ದಾರೆ.

ಪಿಟಿಐ ಪ್ರಕಾರ, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್‌ ಠಾಕೂರ್‌ ಕಂಗನಾ ಅವರ ಮುಂಬೈನ ಕಟ್ಟಡವನ್ನು ಕೆಡವಿರುವುದನ್ನು ಖಂಡಿಸಿದ್ದಾರೆ. 'ಆಕೆ ರಾಜ್ಯದ ಮಗಳಾಗಿದ್ದು, ಅವರ ಕಾರ್ಯನಿರ್ವಹಣೆಗೆ ಸೂಕ್ತ ವಾತಾವರಣ ದೊರೆಯಬೇಕು' ಎಂದಿರುವುದಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.