ADVERTISEMENT

ಕಾಂಗರೂ ನ್ಯಾಯಾಲಯ ಪ್ರಜಾಪ್ರಭುತ್ವಕ್ಕೆ ಮಾರಕ: ಸಿಜೆಐ ರಮಣ

ಮಾಧ್ಯಮಗಳ ನಿರ್ದಿಷ್ಟ ಕಾರ್ಯಸೂಚಿಯ ಚರ್ಚೆಗಳ ಬಗ್ಗೆ ಪ್ರಶ್ನೆ

ಪಿಟಿಐ
Published 24 ಜುಲೈ 2022, 4:08 IST
Last Updated 24 ಜುಲೈ 2022, 4:08 IST
ಎನ್‌.ವಿ. ರಮಣ
ಎನ್‌.ವಿ. ರಮಣ   

ರಾಂಚಿ: ಮಾಧ್ಯಮಗಳು ನಡೆಸುತ್ತಿರುವ ನಿರ್ದಿಷ್ಟ ಕಾರ್ಯಸೂಚಿಯ ಚರ್ಚೆಗಳು ಮತ್ತು ‘ಕಾಂಗರೂ ನ್ಯಾಯಾಲಯ’ಗಳು (ನಿರ್ದಿಷ್ಟ ಹಿತಾಸಕ್ತಿಗಾಗಿ ನಡೆಸುವ ವಿಚಾರಣೆ) ದೇಶದ ಪ್ರಜಾಪ್ರಭುತ್ವ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿವೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌.ವಿ. ರಮಣ ಶನಿವಾರ ಕಳವಳ ವ್ಯಕ್ತಪಡಿಸಿದರು.

ನ್ಯಾಯಮೂರ್ತಿ ಸತ್ಯವ್ರತ ಸಿನ್ಹಾ ಅವರ ಸ್ಮರಣಾರ್ಥ ಇಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ‘ಮಾಧ್ಯಮಗಳು ನಡೆಸುತ್ತಿರುವ ವಿಚಾರಣೆಗಳಿಂದಾಗಿ ದೇಶದ ನ್ಯಾಯಾಲಯ ವ್ಯವಸ್ಥೆಯ ಸ್ವತಂತ್ರ, ನಿಷ್ಪಕ್ಷಪಾತ ಕಾರ್ಯ ನಿರ್ವಹಣೆಗೆ ಧಕ್ಕೆ ಎದುರಾಗಿದೆ’ ಎಂದರು.

‘ಮಾಧ್ಯಮಗಳು ನಡೆಸುತ್ತಿರುವ ವಿಚಾರಣೆಗಳು ಪ್ರಕರಣವನ್ನು ಇತ್ಯರ್ಥಪಡಿಸುವುದಕ್ಕೆ ಮಾರ್ಗದರ್ಶಿಯಾಗಲು ಸಾಧ್ಯವಿಲ್ಲ. ಅಲ್ಲದೆ ಮಾಧ್ಯಮಗಳ ಕಾಂಗರೂ ಕೋರ್ಟ್‌ಗಳಿಂದಾಗಿ ಅನುಭವಿ ನ್ಯಾಯಾಧೀಶರಿಗೂ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕಷ್ಟಕರವಾಗಿ ಪರಿಣಮಿಸಿದೆ. ಈ ರೀತಿಯ ಮಾಧ್ಯಮ ವರ್ತನೆಗಳು ದೇಶದ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಹಾನಿ ತರುತ್ತಿವೆ’ ಎಂದು ಅವರು ದೂರಿದರು. ‘ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಮರೆತಿರುವುದರಿಂದ ನಮ್ಮ ಪ್ರಜಾಪ್ರಭುತ್ವ ಎರಡು ಹೆಜ್ಜೆ ಹಿಂದಕ್ಕೆ ಹೋದಂತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ನಿವೃತ್ತಿಯ ಬಳಿಕ ರಕ್ಷಣೆ ಇಲ್ಲ:‘ನ್ಯಾಯಾಧೀಶರು ತಮ್ಮ ಸೇವಾ ಅವಧಿಯಲ್ಲಿ ಹಲವು ಅಪರಾಧಿಗಳಿಗೆ ಶಿಕ್ಷೆ ನೀಡಿ ಜೈಲಿಗೆ ಕಳುಹಿಸಿರುತ್ತಾರೆ. ನ್ಯಾಯಾಧೀಶರು ನಿವೃತ್ತಿಯಾಗುತ್ತಿದ್ದಂತೆ ಎಲ್ಲ ರೀತಿಯ ರಕ್ಷಣೆಯನ್ನು ಕಳೆದುಕೊಳ್ಳುತ್ತಾರೆ. ನಿವೃತ್ತಿ ಬಳಿಕ ಅವರು ಯಾವುದೇ ಭದ್ರತೆಯಿಲ್ಲದೆ ಜೀವನ ಕಳೆಯಬೇಕಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.