
ಉತ್ತರ ಪ್ರದೇಶದ ಕಾನ್ಪುರದ ಗಣೇಶ್ ಶಂಕರ್ ವಿದ್ಯಾರ್ಥಿ ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿ ಎಟಿಎಸ್ ಅಧಿಕಾರಿಗಳು ವಿಚಾರಣೆ ನಡೆಸಿದರು
ಕಾನ್ಪುರ: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಪ್ರಬಲ ಸ್ಫೋಟದ ತನಿಖೆಯ ಭಾಗವಾಗಿ ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ಕಾನ್ಪುರದಲ್ಲಿ ಬಂಧಿಸಿದೆ.
ಬಂಧಿತನನ್ನು ಇಲ್ಲಿನ ಗಣೇಶ ಶಂಕರ ವಿದ್ಯಾರ್ಥಿ ಮೆಮೋರಿಯಲ್ (ಜಿಎಸ್‌ವಿಎಂ) ವೈದ್ಯಕೀಯ ಕಾಲೇಜಿನ ಮೊದಲ ವರ್ಷದ ಡಿ.ಎಂ (ಕಾರ್ಡಿಯಾಲಜಿ) ವಿದ್ಯಾರ್ಥಿ ಡಾ. ಮೊಹಮ್ಮದ್ ಆರಿಫ್ (32) ಎಂದು ಗುರುತಿಸಲಾಗಿದೆ. ಆತನನ್ನು ಹೆಚ್ಚಿನ ವಿಚಾರಣೆಗೆ ದೆಹಲಿಗೆ ಸ್ಥಳಾಂತರಿಸಲಾಗಿದೆ.
ಆತನ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಅನ್ನು ವಶಕ್ಕೆ ಪಡೆದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆತ ಬಾಡಿಗೆಗಿದ್ದ ಅಶೋಕನಗರ, ನಜೀರಾಬಾದ್‌ನಲ್ಲಿನ ವಸತಿಗಳನ್ನು ಎಟಿಎಸ್ ತಂಡವರು ಪರಿಶೀಲಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆರಿಫ್, ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ವ್ಯಕ್ತಿ. ಈಗಾಗಲೇ ಬಂಧನದಲ್ಲಿರುವ ಜಿಎಸ್‌ವಿಎಂ ಮಾಜಿ ಬೋಧಕಿ ಡಾ. ಶಾಹೀನ್ ಸಯೀದ್ ಅವರ ವಿಚಾರಣೆ ವೇಳೆ ತಿಳಿದು ಬಂದ ಮಾಹಿತಿ ಆಧರಿಸಿ ಎಟಿಎಸ್‌ನವರು ಆರಿಫ್‌ನನ್ನು ಬಂಧಿಸಿದ್ದಾರೆ.
ನಿಷೇಧಿತ ಜೈಷ್–ಎ–ಮೊಹಮ್ಮದ್ (ಜೆಇಎಂ) ಮತ್ತು ಅನ್ಸಾರ್ ಗಜ್ವತ್–ಉಲ್–ಹಿಂದ್ ಸಂಘಟನೆಗಳ ಜತೆಗೆ ನಂಟು ಹೊಂದಿದ್ದ ‘ವೈಟ್‌ಕಾಲರ್ ಭಯೋತ್ಪಾದಕರ’ ಜಾಲವನ್ನು ಭೇದಿಸಿದ್ದ ಪೊಲೀಸರು, ಶಾಹೀನ್ ಸಯೀದ್ ಸೇರಿದಂತೆ ಎಂಟು ಜನರನ್ನು ಸೋಮವಾರ ಬಂಧಿಸಿದ್ದರು.
ಸ್ಫೋಟದ ವೇಳೆ ಫೋನ್‌ನಲ್ಲಿ ಸಂಪರ್ಕ: ‘ಕೆಂಪುಕೋಟೆ ಬಳಿ ಸ್ಫೋಟ ಸಂಭವಿಸಿದ ವೇಳೆಯಲ್ಲಿ ಡಾ. ಶಾಹೀನ್ ಮತ್ತು ಅವರ ಸಹೋದರ ಪರ್ವೇಜ್ ಸೇರಿದಂತೆ ಅವರ ಜಾಲದಲ್ಲಿದ್ದವರ ಜತೆಗೆ ಆರಿಫ್ ಫೋನ್ ಮೂಲಕ ಸಂಪರ್ಕದಲ್ಲಿದ್ದ’ ಎಂದು ಮೂಲಗಳು ತಿಳಿಸಿವೆ.
‘ಈತ ಸಹ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ. ಅದು ಪೊಲೀಸರ ಅನುಮಾನವನ್ನು ಹೆಚ್ಚಿಸಿತ್ತು. ಎಟಿಎಸ್ ಸಿಬ್ಬಂದಿ ಆತನನ್ನು ವಶಕ್ಕೆ ಪಡೆಯುವಾಗ, ಆತ ತನ್ನ ಮೊಬೈಲ್‌ನಲ್ಲಿದ್ದ ದತ್ತಾಂಶವನ್ನು ಅಳಿಸಲು ಪ್ರಯತ್ನಿಸಿದ್ದ. ಅಷ್ಟರಲ್ಲಿ ಸಿಬ್ಬಂದಿ ಅದನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು’ ಎಂದು ಅವರು ವಿವರಿಸಿದ್ದಾರೆ.
‘ಆತನ ದೂರವಾಣಿ ಕರೆ ದಾಖಲೆಗಳು ಮತ್ತು ಚಾಟ್‌ಗಳನ್ನು ಗಮನಿಸಿದರೆ, ಸಂಚಿನ ಸೂತ್ರಧಾರ ಮತ್ತು ಇತರ ಶಂಕಿತರ ಜತೆ ಸಂಪಕರ್ದಲ್ಲಿದ್ದ’ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಈ ಜಾಲದವರು ಒಂದೇ ಇ–ಮೇಲ್ ಐಡಿಯನ್ನು ಹಂಚಿಕೊಂಡಿದ್ದರು ಎಂದು ನಂಬಲಾಗಿದೆ. ಇದರ ಮೂಲಕವೇ ಅವರು ಪರಸ್ಪರ ಸಂದೇಶ ವಿನಿಮಯ ಮಾಡಿಕೊಳ್ಳುತ್ತಿದ್ದರು. ಎಲೆಕ್ಟ್ರಾನಿಕ್ ಕಣ್ಗಾವಲನ್ನು ತಪ್ಪಿಸಿಕೊಳ್ಳಲು ಭಯೋತ್ಪಾದಕ ಸಂಘಟನೆಗಳು ಈ ವಿಧಾನವನ್ನು ಹೆಚ್ಚಾಗಿ ಬಳಸುತ್ತವೆ’ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಡಾ. ಆರಿಫ್ ಮೂರು ತಿಂಗಳ ಹಿಂದೆಯಷ್ಟೇ ಅಖಿಲ ಭಾರತ ಕೌನ್ಸೆಲಿಂಗ್ ಮೂಲಕ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದ. ಬುಧವಾರ ಮಧ್ಯಾಹ್ನದವರೆಗೂ ಕಾರ್ಯನಿರ್ವಹಿಸಿದ್ದ’ ಎಂದು ಕಾಲೇಜಿನ ಕಾರ್ಡಿಯಾಲಜಿ ವಿಭಾಗದ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.
ಇದರ ಬೆನ್ನಲ್ಲೇ ಕಾಲೇಜಿನ ಮೊದಲ, ದ್ವಿತೀಯ ಮತ್ತು ಮೂರನೇ ವರ್ಷದ ಕಾರ್ಡಿಯಾಲಜಿ ವಿದ್ಯಾರ್ಥಿಗಳ ಮೇಲೆ ನಿಗಾ ಇಟ್ಟು, ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕರೆಗಳ ಮಾಹಿತಿಯನ್ನು ವಿಶ್ಲೇಷಿಸಿರುವ ಪೊಲೀಸರು, ಪ್ರಾಥಮಿಕ ವರದಿಗಳ ಪ್ರಕಾರ ಈ ಕೃತ್ಯದ ಮಾಸ್ಟರ್‌ಮೈಂಡ್ ಜತೆ ಸಂಪರ್ಕದಲ್ಲಿರುವುದು ತಿಳಿದುಬಂದಿದೆ. ಇವರೆಲ್ಲರೂ ಒಂದೇ ಇಮೇಲ್ ಐಡಿಯನ್ನು ಬಳಸಿ, ಅದರಲ್ಲಿ ‘ಡ್ರಾಫ್ಟ್’ ಮೋಡ್‌ನಲ್ಲಿ ತಮ್ಮ ಸಂಭಾಷಣೆಗಳನ್ನು ‘ಸೇವ್’ ಮಾಡುತ್ತಿದ್ದರು. ಇಮೇಲ್ ಕಳುಹಿಸುವುದರಿಂದ ತಮ್ಮ ಷಡ್ಯಂತ್ರ ಬಯಲಾಗುವ ಭೀತಿಯಲ್ಲಿ ಭಯೋತ್ಪಾದಕ ಗುಂಪುಗಳು ಈ ತಂತ್ರವನ್ನು ಅನುಸರಿಸುತ್ತವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಡಾ. ಆರಿಫ್ ಬಂಧನದಿಂದ ಕಾನ್ಪುರದ ವೈದ್ಯಕೀಯ ಕಾಲೇಜಿನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮೂರು ತಿಂಗಳ ಹಿಂದೆ ಇಲ್ಲಿನ ಹೃದ್ರೋಗ ವಿಭಾಗಕ್ಕೆ ಆರಿಫ್ ದಾಖಲಾಗಿದ್ದರು ಎಂದೆನ್ನಲಾಗಿದೆ.
ಘಟನೆಯನ್ನು ಖಚಿತಪಡಿಸಿದ ಕಾಲೇಜಿನ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ. ಜ್ಞಾನೇಂದ್ರ, ‘ಅಖಿಲ ಭಾರತ ಮಟ್ಟದ ಕೌನ್ಸೆಲಿಂಗ್ ಮೂಲಕ ಡಾ. ಆರಿಫ್ ಈ ವಿಭಾಗಕ್ಕೆ ದಾಖಲಾಗಿದ್ದರು. ಬುಧವಾರ ವಿಭಾಗಕ್ಕೆ ಬಂದಿದ್ದ ಇವರು ನಂತರ ತಮ್ಮ ವಸತಿಗೆ ತೆರಳಿದ್ದರು. ಸಂಜೆ 7ರ ಹೊತ್ತಿಗೆ ಇವರ ಬಂಧನ ಸುದ್ದಿ ತಿಳಿಯಿತು. ಕ್ಯಾಂಪಸ್‌ನಲ್ಲಿದ್ದ ದಿನಗಳಲ್ಲಿ ತಮ್ಮ ಪಾಡಿಗೆ ತಾವು ಇರುತ್ತಿದ್ದರು. ತಮ್ಮ ಕೆಲಸವನ್ನು ಸದ್ದಿಲ್ಲದೆ ಮುಗಿಸಿ ತೆರಳುತ್ತಿದ್ದರು’ ಎಂದಿದ್ದಾರೆ.
‘ಮುಂಜಾಗ್ರತಾ ಕ್ರಮವಾಗಿ ಹೃದ್ರೋಗ ವಿಭಾಗದ ಮೊದಲ, ಎರಡನೇ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದಿದ್ದಾರೆ.
ಆರಿಫ್ ಇದ್ದ ಬಾಡಿಗೆ ಮನೆಯ ಮಾಲೀಕ ಕನ್ಹಯ್ಯ ಲಾಲ್ ಪ್ರತಿಕ್ರಿಯಿಸಿ, ‘ಕಳೆದ ಒಂದು ತಿಂಗಳಿಂದ ಅವರು ಈ ಮನೆಯಲ್ಲಿದ್ದರು. ಇವರೊಂದಿಗೆ ದ್ವಿತೀಯ ವರ್ಷದ ಡಾ. ಅಭಿಷೇಕ್ ಎಂಬುವವರೂ ಇದ್ದರು. ಸಂಜೆ 7.30ರ ಸುಮಾರಿಗೆ ನಾಲ್ಕು ಜನರ ತಂಡ ಮನೆಗೆ ಬಂದಿತು. ಅವರ ಬಳಿ ಅದಾಗಾಗಲೇ ಮನೆಯ ಬೀಗ ಇತ್ತು. ಇಡೀ ಮನೆಯನ್ನೇ ಶೋಧಿಸಿದರು. ಮತ್ತೆ ಬೀಗ ಹಾಕಿ ಹೊರಟರು’ ಎಂದು ಮಾಹಿತಿ ನೀಡಿದ್ದಾರೆ.
‘ಮನೆ ಬಾಡಿಗೆ ಪಡೆಯುವಾಗ ಅವರು ಗುರುತಿನ ಚೀಟಿ ನೀಡಿದ್ದರು. ಅನುಮಾನ ಬರುವಂತೆ ಎಂದೂ ಅವರು ನಡೆದುಕೊಂಡಿಲ್ಲ. ಅಪರಿಚಿತರೂ ಬರುತ್ತಿರಲಿಲ್ಲ’ ಎಂದಿದ್ದಾರೆ.
ಕಾನ್ಪುರ ಪೊಲೀಸ್ ಆಯುಕ್ತ ರಘುವೀರ್ ಲಾಲ್ ಮಾಹಿತಿ ನೀಡಿ, ‘ಡಾ. ಆರಿಫ್ ಎಂಬಾತನನ್ನು ಎಟಿಎಸ್ ಅಧಿಕಾರಿಗಳು ವಶಕ್ಕೆ ಪಡೆದಿರುವ ಮಾಹಿತಿ ಇದೆ. ಅದರ ವರದಿಯನ್ನು ಪರಿಶೀಲಿಸಲು ತಂಡವನ್ನು ಕಳುಹಿಸಲಾಗಿದೆ. ಅದು ಖಚಿತವಾದ ನಂತರ ಪ್ರತಿಕ್ರಿಯಿಸಲಾಗುವುದು’ ಎಂದಿದ್ದಾರೆ.
ಇದರ ನಡುವೆ ಡಾ. ಶಾಹೀನ್ ಜತೆ ಸಂಪರ್ಕ ಇರಬಹುದಾದ ವ್ಯಕ್ತಿಗಳಿಗೆ ಎಟಿಎಸ್ ಅಧಿಕಾರಿಗಳು ಕಾನ್ಪುರದಲ್ಲಿ ವ್ಯಾಪಕ ಶೋಧ ನಡೆಸಿದ್ದಾರೆ. ಇದರಲ್ಲಿ ಇನ್ನಷ್ಟು ಜನರು ಭಾಗಿಯಾಗಿರುವ ಶಂಕೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.