ಕನ್ವರ್ ಯಾತ್ರಾ ಮಾರ್ಗದಲ್ಲಿ ಚಹಾ ಅಂಗಡಿ ಮಾಲೀಕರೊಂದಿಗೆ ಪೊಲೀಸ್ ಅಧಿಕಾರಿಗಳು ಮಾತನಾಡುತ್ತಿರುವುದು
ಪಿಟಿಐ ಚಿತ್ರ
ಡೆಹ್ರಾಡೂನ್: ವಾರ್ಷಿಕ ಕನ್ವರ್ ಯಾತ್ರಿಕರು ಸಾಗುವ ಮಾರ್ಗದುದ್ದಕ್ಕೂ ತೆರೆಯಲಾಗಿರುವ ಮಳಿಗೆಗಳು ಆಹಾರ ಪರವಾನಗಿ ಅಥವಾ ನೋಂದಣಿ ಪ್ರಮಾಣಪತ್ರ ಪ್ರದರ್ಶಿಸುವುದನ್ನು ಉತ್ತರಾಖಂಡ ಸರ್ಕಾರ ಕಡ್ಡಾಯಗೊಳಿಸಿದೆ.
ತೀರ್ಥಯಾತ್ರೆಯ ಮಾರ್ಗದಲ್ಲಿರುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಢಾಬಾಗಳು, ಫಾಸ್ಟ್‌ಫುಟ್‌ಗಳು, ತಳ್ಳುಗಾಡಿಗಳ ಮಾಲೀಕರು ಪರವಾನಗಿ ಅಥವಾ ನೋಂದಣಿ ಪ್ರಮಾಣಪತ್ರದ ಪ್ರತಿಯನ್ನು ಗ್ರಾಹಕರು ಸುಲಭವಾಗಿ ನೋಡಲು ಸಾಧ್ಯವಾಗುವಂತೆ ಪ್ರದರ್ಶಿಸಬೇಕು ಎಂದು ಆರೋಗ್ಯ ಕಾರ್ಯದರ್ಶಿ ಹಾಗೂ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಆಯುಕ್ತ ಆರ್. ರಾಜೇಶ್ ಕುಮಾರ್ ತಿಳಿಸಿದ್ದಾರೆ.
ಸಣ್ಣ ವ್ಯಾಪಾರಿಗಳಿಗೂ ಇದು ಅನ್ವಯ ಎಂದು ಸ್ಪಷ್ಟಪಡಿಸಿದ್ದಾರೆ.
ಆದೇಶ ಪಾಲಿಸದವರ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆ–2006ರ ಸೆಕ್ಷನ್ 55ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ₹ 2 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಯಾತ್ರಿಕರಿಗೆ ನೀಡುವ ಆಹಾರದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲಾಗದು ಎಂದಿರುವ ಕುಮಾರ್, ಆದೇಶವು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿರುವುದನ್ನು ಸಂಬಂಧಪಟ್ಟ ಅಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕು ಎಂದೂ ನಿರ್ದೇಶಿಸಿದ್ದಾರೆ.
ಹರಿದ್ವಾರ, ಡೆಹ್ರಾಡೂನ್, ತೆಹ್ರಿ, ಪೌರಿ ಮತ್ತು ಉತ್ತರಕಾಶಿ ಜಿಲ್ಲೆಗಳಲ್ಲಿ ಆರೋಗ್ಯ ಸುರಕ್ಷತಾ ಅಧಿಕಾರಿಗಳ ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. ಹಾಲು, ಸಿಹಿತಿನಿಸುಗಳು, ಎಣ್ಣೆ, ಮಸಾಲೆ ಪದಾರ್ಥಗಳು ಮತ್ತು ಪಾನೀಯಗಳ ಮಾದರಿಗಳನ್ನು ನಿರಂತರವಾಗಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗುತ್ತದೆ. ಮಾದರಿಗಳು ಮಾನದಂಡಗಳಿಗೆ ಅನುಗುಣವಾಗಿ ಇಲ್ಲದಿದ್ದರೆ ಸಂಬಂಧಪಟ್ಟ ಮಳಿಗೆ ಅಥವಾ ಹೋಟೆಲ್ ಅನ್ನು ಕೂಡಲೇ ಮುಚ್ಚಲಾಗುತ್ತದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಹೆಚ್ಚುವರಿ ಆಯುಕ್ತ ತಜಬರ್ ಸಿಂಗ್ ಜಗ್ಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.