ADVERTISEMENT

ಕನ್ವಾರ್ ಯಾತ್ರಿಕರಿಂದ ಪೊಲೀಸ್ ಜೀಪ್ ಭಾಗಶಃ ಧ್ವಂಸ: ವಿಡಿಯೊ ವೈರಲ್

ಏಜೆನ್ಸೀಸ್
Published 9 ಆಗಸ್ಟ್ 2018, 9:17 IST
Last Updated 9 ಆಗಸ್ಟ್ 2018, 9:17 IST
ಪೊಲೀಸ್ ಕಾರಿನ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡುತ್ತಿರುವ ಯಾತ್ರಿಕರು –ವಿಡಿಯೊದಿಂದ ಸೆರೆಹಿಡಿದ ಚಿತ್ರ
ಪೊಲೀಸ್ ಕಾರಿನ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡುತ್ತಿರುವ ಯಾತ್ರಿಕರು –ವಿಡಿಯೊದಿಂದ ಸೆರೆಹಿಡಿದ ಚಿತ್ರ   

ಲಖನೌ: ಸ್ಥಳೀಯರ ಜತೆ ವಾಗ್ವಾದ ನಡೆಸಿದ ಕನ್ವಾರ್ ಯಾತ್ರಿಕರು (ಶಿವನ ಭಕ್ತರು ಕೈಗೊಳ್ಳುವ ವಾರ್ಷಿಕ ಯಾತ್ರೆ) ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ಘಟನೆ ಉತ್ತರ ಪ್ರದೇಶದ ಬುಲಂದರ್‌ಶಹರ್‌ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಯಾತ್ರೆ ತೆರಳುತ್ತಿದ್ದವರು ಮತ್ತು ಸ್ಥಳೀಯರ ನಡುವೆ ಮಂಗಳವಾರ ವಾಗ್ವಾದ ನಡೆದಿದೆ. ಈ ವೇಳೆ ಯಾತ್ರಿಕರು ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ. ಘಟನೆಯ ವಿಡಿಯೊ ಇದೀಗ ವೈರಲ್ ಆಗಿದೆ.

ಇಬ್ಬರು ಯಾತ್ರಿಕರು ದೊಣ್ಣೆಯಿಂದ ಪೊಲೀಸ್ ಜೀಪ್‌ ಮೇಲೆ ಪ್ರಹಾರ ನಡೆಸಿದ್ದಾರೆ. ಪೊಲೀಸ್‌ ಜೀಪ್‌ನ ಸುತ್ತಲೂ ನೂರಾರು ಜನ ಜಮಾಯಿಸಿದ್ದು, ಹಲವರು ಪೊಲೀಸರ ಮೇಲೆ ಹಲ್ಲೆಯನ್ನೂ ನಡೆಸಿದ್ದಾರೆ. ತಮ್ಮತ್ತ ನುಗ್ಗುತ್ತಿರುವ ಜನರಿಂದ ತಪ್ಪಿಸಿಕೊಳ್ಳಲು ಪರದಾಡಿದ ಪೊಲೀಸರು ಕೊನೆಗೂ ಪ್ರಯಾಸದಿಂದ ಜೀಪನ್ನೇರಿದ್ದಾರೆ. ಜೀಪ್‌ಅನ್ನುಹಿಂದಕ್ಕೆ ಚಲಿಸುವಂತೆ ಮಾಡಿ ತಿರುಗಿಸಿಕೊಂಡು ತಪ್ಪಿಸಿಕೊಂಡಿದ್ದಾರೆ. ನಂತರ ಅಲ್ಲಿದ್ದ ಯಾತ್ರಿಕರು ಯಾವುದೋ ಕಡೆಗೆ ಓಡಿ ಹೋಗುತ್ತಿರುವ ದೃಶ್ಯ ವಿಡಿಯೊದಲ್ಲಿ ಕಂಡುಬಂದಿದೆ.

ಇದೇ ಮೊದಲಲ್ಲ: ಕನ್ವಾರ್ ಯಾತ್ರೆ ವೇಳೆ ಈ ಹಿಂದೆಯೂ ಉತ್ತರ ಪ್ರದೇಶದಲ್ಲಿ ಗಲಭೆಗಳಾಗಿವೆ. ಬರೇಲಿ ಜಿಲ್ಲೆಯ ಖೇಲುಮ್‌ನಲ್ಲಿ ಕಳೆದ ವರ್ಷ ಯಾತ್ರೆ ಹಾದುಹೋಗುತ್ತಿದ್ದ ವೇಳೆ ಹಿಂಸಾಚಾರ ನಡೆದಿತ್ತು. ಹತ್ತಾರು ಜನ ಗಾಯಗೊಂಡಿದ್ದರು. 15 ಮಂದಿ ಭದ್ರತಾ ಸಿಬ್ಬಂದಿಯೂ ಗಾಯಗೊಂಡಿದ್ದರು.

ಇದನ್ನೂ ಓದಿ: ಪೊಲೀಸರ ಬೆದರಿಕೆಯಿಂದ ಗ್ರಾಮ ತೊರೆದ 70 ಮುಸ್ಲಿಂ ಕುಟುಂಬಗಳು

ಇನ್ನಷ್ಟು...

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.