ADVERTISEMENT

ಚರ್ಚೆಗೆ ಗ್ರಾಸವಾದ ಕಪಿಲ್ ಸಿಬಲ್ ಔತಣಕೂಟ: ಪ್ರತಿಪಕ್ಷಗಳ ಹಲವು ನಾಯಕರು ಭಾಗಿ

ಡೆಕ್ಕನ್ ಹೆರಾಲ್ಡ್
Published 10 ಆಗಸ್ಟ್ 2021, 3:41 IST
Last Updated 10 ಆಗಸ್ಟ್ 2021, 3:41 IST
ಕಪಿಲ್ ಸಿಬಲ್ (ಪಿಟಿಐ ಚಿತ್ರ)
ಕಪಿಲ್ ಸಿಬಲ್ (ಪಿಟಿಐ ಚಿತ್ರ)   

ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್ ಅವರು ಪಕ್ಷದ ಮತ್ತು ಇತರ ಪ್ರತಿಪಕ್ಷಗಳ ನಾಯಕರಿಗೆ ಸೋಮವಾರ ಖಾಸಗಿಯಾಗಿ ಔತಣಕೂಟ ಆಯೋಜಿಸಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪಕ್ಷದ ನಾಯಕತ್ವ ಮತ್ತು ಸಂಘಟನೆಯಲ್ಲಿ ಸುಧಾರಣೆಯಾಗಬೇಕೆಂದು ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ 23 ನಾಯಕರಲ್ಲಿ ಸಿಬಲ್ ಕೂಡ ಪ್ರಮುಖರಾಗಿದ್ದರು. ಹೀಗಾಗಿ ಅವರ ಖಾಸಗಿ ಔತಣಕೂಟ ವದಂತಿಗಳಿಗೆ ಕಾರಣವಾಗಿದೆ ಎಂದು ‘ಐಎಎನ್‌ಎಸ್’ ವರದಿ ಮಾಡಿದೆ.

ಸಿಬಲ್ ಅವರ ಔತಣಕೂಟದಲ್ಲಿ ಎನ್‌ಸಿಪಿ ವರಿಷ್ಠ ಶರದ್ ಪವಾರ್, ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒಬ್ರಿಯಾನ್, ಡಿಎಂಕೆಯ ತಿರುಚಿ ಶಿವ, ಆರ್‌ಎಲ್‌ಡಿ ಅಧ್ಯಕ್ಷ ಜಯಂತ್ ಚೌಧರಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ರಾಮಗೋಪಾಲ್ ಯಾದವ್, ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್, ಕಾಂಗ್ರೆಸ್ ನಾಯಕರಾದ ಮನೀಷ್ ತಿವಾರಿ, ಶಶಿ ತರೂರ್ ಮತ್ತು ಆನಂದ್ ಶರ್ಮಾ ಭಾಗವಹಿಸಿದ್ದರು.

ಕಪಿಲ್ ಸಿಬಲ್ ಔತಣಕೂಟ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ಅವರಿಗೆ 73 ವರ್ಷವಾದ ಹಿನ್ನೆಲೆಯಲ್ಲಿ ಆಪ್ತರನ್ನು ಔತಣಕೂಟಕ್ಕೆ ಕರೆದಿದ್ದರಷ್ಟೆ ಎಂದು ಕೆಲವು ಮೂಲಗಳು ಹೇಳಿವೆ. ಆದರೆ, ಮುಂದಿನ ವರ್ಷ ನಡೆಯಲಿರುವ ನಿರ್ಣಾಯಕ ವಿಧಾನಸಭೆ ಚುನಾವಣೆಗಳಿಗೆ ಪೂರ್ವಭಾವಿಯಾಗಿ ಪ್ರತಿಪಕ್ಷಗಳ ನಾಯಕರ ಭೇಟಿ ಎಂದು ಇನ್ನು ಕೆಲವು ಮೂಲಗಳು ಹೇಳಿವೆ.

ಪಕ್ಷದ ಆಂತರಿಕ ಕಾರ್ಯಚಟುವಟಿಕೆಗೆ ಸಂಬಂಧಿಸಿದ ಊಹಾಪೋಹಗಳನ್ನು ಔತಣಕೂಟದಲ್ಲಿ ಭಾಗವಹಿಸಿದ ಕಾಂಗ್ರೆಸ್ ನಾಯಕರು ಅಲ್ಲಗಳೆದಿದ್ದಾರೆ. ಆದರೆ, 2024ರ ಚುನಾವಣೆಗೆ ಮುಂಚಿತವಾಗಿ ಪ್ರತಿಪಕ್ಷಗಳ ಒಗ್ಗಟ್ಟು ಬಯಸುವುದಾಗಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.