ADVERTISEMENT

ಇಂದು ಕಾರ್ಗಿಲ್‌ ವಿಜಯ ದಿನ: ಭಾರತದ ವೀರ ಯೋಧರ ಸ್ಮರಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜುಲೈ 2020, 3:35 IST
Last Updated 26 ಜುಲೈ 2020, 3:35 IST
ಪಾಕಿಸ್ತಾನದ ವಿರುದ್ಧ ಯುದ್ಧ ಗೆದ್ದ ಸಂಭ್ರಮದಲ್ಲಿ ಭಾರತದ ಯೋಧರು
ಪಾಕಿಸ್ತಾನದ ವಿರುದ್ಧ ಯುದ್ಧ ಗೆದ್ದ ಸಂಭ್ರಮದಲ್ಲಿ ಭಾರತದ ಯೋಧರು    

ದೆಹಲಿ: 21 ವರ್ಷಗಳ ಹಿಂದೆ (1999ರ ಜುಲೈ 26), ಪಾಕಿಸ್ತಾನದ ಸೇನೆ ಆಕ್ರಮಿಸಿಕೊಂಡಿದ್ದ ಕಾರ್ಗಿಲ್‌ನ ಪ್ರದೇಶಗಳನ್ನು ಭಾರತೀಯ ಯೋಧರು ಮರಳಿ ವಶಕ್ಕೆ ಪಡೆದಿದ್ದರು. ಅಂದಿನಿಂದ ಈ ದಿನವನ್ನು ‘ಕಾರ್ಗಿಲ್‌ ದಿನ’ವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಸಾಮಾಜಿಕ ತಾಣಗಳಲ್ಲಿ ವಿಜಯ ದಿನ ಇಂದು ಟ್ರೆಂಡ್‌ ಆಗಿದೆ.

ಕಾರ್ಗಿಲ್‌ ವಿಜಯ ದಿನವಾದ ಇಂದು (ಜುಲೈ 26) ಸಾಮಾಜಿಕ ತಾಣಗಳಲ್ಲಿ ಭಾರತೀಯ ಸೇನೆ, ಯೋಧರ ಬಲಿದಾನವನ್ನು ಕೊಂಡಾಡಿದ್ದಾರೆ. ಹೀಗಾಗಿ #IndianArmy, #KargilVijayDiwas, #OperationVijay ಹ್ಯಾಶ್‌ ಟ್ಯಾಗ್‌ಗಳು ಟ್ರೆಂಡ್‌ ಆಗಿವೆ.

ಪಾಕಿಸ್ತಾನದ ಸೈನಿಕರನ್ನು ಹಿಮ್ಮೆಟ್ಟಿಸಲು ಮತ್ತು ನಮ್ಮ ಪ್ರದೇಶಗಳನ್ನು ಮರುವಶಪಡಿಸಿಕೊಳ್ಳಲು ನಡೆಸಿದ ಸೇನಾ ಕಾರ್ಯಾಚರಣೆ ‘ಆಪರೇಷನ್ ವಿಜಯ್’ನಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬ ವೀರ ಯೋಧರನ್ನು ಇಂದು ಸ್ಮರಿಸಿದ್ದಾರೆ.

ADVERTISEMENT

ಅತ್ಯಂತ ಸವಾಲಿನ ಸನ್ನಿವೇಶದಲ್ಲೂ ಶತ್ರುಗಳ ವಿರುದ್ಧ ಹೋರಾಡಿದ ಭಾರತೀಯ ಸಶಸ್ತ್ರ ಪಡೆಗಳ ಕೆಚ್ಚೆದೆಯ ಸೈನಿಕರನ್ನು ಕಾರ್ಗಿಲ್‌ ವಿಜಯದ 21ನೇ ವಿಜಯೋತ್ಸವದ ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ಭಾರತೀಯ ಸೈನಿಕರ ಹೋರಾಟವು ಜಗತ್ತುಇತ್ತೀಚಿಗೆ ಕಂಡ ಅತ್ಯಂತ ಶೌರ್ಯದ ಸಾಧನೆಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

ಇತ್ತೀಚಿನ ಇತಿಹಾಸದಲ್ಲಿ ಜಗತ್ತು ಸಾಕ್ಷಿಯಾಗಿದ್ದ ಅತ್ಯಂತ ಸವಾಲಿನ ಪರಿಸ್ಥಿತಿಗಳಲ್ಲಿ ಶತ್ರುಗಳ ವಿರುದ್ಧ ಹೋರಾಡಿದ ಭಾರತೀಯ ಸಶಸ್ತ್ರ ಪಡೆಗಳ ಕೆಚ್ಚೆದೆಯ ಸೈನಿಕರಿಗೆ ನಮಸ್ಕರಿಸಲು ನಾನು ಬಯಸುತ್ತೇನೆ.

ಭಾರತದ ಹೆಮ್ಮೆ, ಶೌರ್ಯ ಮತ್ತು ಅಚಲ ನಾಯಕತ್ವಕ್ಕೆ'ಕಾರ್ಗಿಲ್ ವಿಜಯ್ ದಿವಾಸ್' ಸಂಕೇತವಾಗಿದೆ ಎಂದು ಕೇಂದ್ರ ಗೃಹ ಸಚಿವಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.

1999ರಲ್ಲಿ ನಡೆದ ಕಾರ್ಗಿಲ್‌ ಯುದ್ಧದ ವಿಜಯದ ಈ ದಿನ ಅಮರವಾಗಿದೆ. ಭಾರತೀಯ ವೀರ ಯೋಧರ ಶೌರ್ಯ, ತ್ಯಾಗ, ಬಲಿದಾನಗಳನ್ನು ಸೇನೆ ಸ್ಮರಿಸುತ್ತದೆ ಎಂದು ಭಾರತೀಯ ಸೇನೆ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.