ADVERTISEMENT

ಕಾಂಗ್ರೆಸ್‌ನಿಂದ ‘ಭಾರತ್‌ ಜೋಡೋ’ ಎಂಬ ಬೃಹನ್ನಾಟಕ: ಬಿಜೆಪಿ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಸೆಪ್ಟೆಂಬರ್ 2022, 7:34 IST
Last Updated 7 ಸೆಪ್ಟೆಂಬರ್ 2022, 7:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಾಂಗ್ರೆಸ್ ಹಮ್ಮಿಕೊಂಡಿರುವ ‘ಭಾರತ ಒಗ್ಗೂಡಿಸಿ (ಭಾರತ್ ಜೋಡೋ) ಯಾತ್ರೆ’ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಅಖಂಡ ಭಾರತವನ್ನು ತುಂಡು ಮಾಡಿದ ಕಾಂಗ್ರೆಸ್ ಈಗ ‘ಭಾರತ್‌ ಜೋಡೋ’ ಎಂಬ ಬೃಹನ್ನಾಟಕ ಮಾಡುತ್ತಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

‘ಅಖಂಡವಾಗಿದ್ದ ಭಾರತವನ್ನು ತುಂಡು ಮಾಡಿದ್ದು ಕಾಂಗ್ರೆಸ್. ಅದೇ ಕಾಂಗ್ರೆಸ್‌ ಈಗ ಭಾರತ್‌ ಜೋಡೋ ಎಂಬ ಬೃಹನ್ನಾಟಕ ಮಾಡುತ್ತಿದೆ. ಕಾಂಗ್ರೆಸ್‌ ಪಕ್ಷಕ್ಕೆ ನಿಜಕ್ಕೂ ಭಾರತವನ್ನು ಜೋಡಿಸುವ ಆಸೆಯಿದ್ದರೆ, ಪಾಕಿಸ್ತಾನದಿಂದ ಭಾರತ್‌ ಜೋಡೋ ಯಾತ್ರೆ ಆರಂಭಿಸಲಿ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ಭಾರತ ಒಗ್ಗೂಡಿಸಿ’ ಯಾತ್ರೆಯು ಇಂದು (ಸೆ. 7) ಆರಂಭವಾಗುತ್ತಿದ್ದು, ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ದೆಹಲಿ, ಪಂಜಾಬ್, ಚಂಡೀಗಡ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಹಾದುಹೋಗಲಿದೆ.

ತಮಿಳುನಾಡಿನಲ್ಲಿ ಮೂರು ದಿನ ಕ್ರಮಿಸಿದ ನಂತರ, ಯಾತ್ರೆಯು ಸೆ. 11 ರಂದು ಕೇರಳ ಪ್ರವೇಶಿಸಲಿದೆ. ಕರ್ನಾಟಕದಲ್ಲಿ 21 ದಿನಗಳಲ್ಲಿ 511 ಕಿ.ಮೀ ಕ್ರಮಿಸಲಿದೆ. ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಯಾತ್ರೆಯ ತಲಾ 15-20 ದಿನ ಒಳಗೊಂಡಿರುತ್ತದೆ. 3-5 ದಿನಗಳಲ್ಲಿ ಇತರ ರಾಜ್ಯಗಳನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಕಾಂಗ್ರೆಸ್ ಈಗಾಗಲೇ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.