ADVERTISEMENT

Karnataka Covid-19 Update: 24 ಗಂಟೆಗಳಲ್ಲಿ ರಾಜ್ಯದಲ್ಲಿ 596 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 10 ಮೇ 2021, 16:12 IST
Last Updated 10 ಮೇ 2021, 16:12 IST
ಕೋವಿಡ್‌–19 ಲಸಿಕೆ ಹಾಕಿಸಿಕೊಳ್ಳಲು ಬೆಂಗಳೂರಿನ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಸಾಲುಗಟ್ಟಿರುವ ಯುವ ಜನತೆ
ಕೋವಿಡ್‌–19 ಲಸಿಕೆ ಹಾಕಿಸಿಕೊಳ್ಳಲು ಬೆಂಗಳೂರಿನ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಸಾಲುಗಟ್ಟಿರುವ ಯುವ ಜನತೆ   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ನಿಂದ ಸತ್ತವರ ಸಂಖ್ಯೆ ಮತ್ತೆ ಏರಿದೆ. 24 ಗಂಟೆಗಳಲ್ಲಿ 596 ಮಂದಿ ಅಸುನೀಗಿದ್ದಾರೆ. ಬೆಂಗಳೂರಿನಲ್ಲೇ (374) ಅಧಿಕ ಸಾವು ಪ್ರಕರಣಗಳು ದಾಖಲಾಗಿದ್ದು, ಮೃತರ ಒಟ್ಟು ಸಂಖ್ಯೆ 19,372ಕ್ಕೆ ಹೆಚ್ಚಿದೆ. ಹೀಗಾಗಿ ಮರಣ ಪ್ರಮಾಣ ದರ ಶೇ 1.51ಕ್ಕೆ ಮುಟ್ಟಿದೆ.

ಸೋಮವಾರ ಹೊಸದಾಗಿ 39,305 ಜನರಲ್ಲಿ ಸೋಂಕು ದೃಢಪಟ್ಟಿರುವ ಕಾರಣ ಸೋಂಕಿತರ ಒಟ್ಟು ಸಂಖ್ಯೆ 20 ಲಕ್ಷದ ಸನಿಹಕ್ಕೆ (19.73) ತಲುಪಿದೆ. 32,188 ಮಂದಿ ಗುಣಮುಖರಾಗಿರುವುದು ಸಮಾಧಾನ ತರಿಸಿದ್ದು, ಈವರೆಗೆ 13.83 ಲಕ್ಷ ಜನ ಚೇತರಿಸಿಕೊಂಡಂತಾಗಿದೆ. ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ 5.71 ಲಕ್ಷಕ್ಕೆ ಏರಿದೆ.

ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಇಳಿದಿದೆ. ಸೋಮವಾರ 16,747 ಜನರಿಗೆ ಸೋಂಕು ತಗುಲಿದೆ. ಬಳ್ಳಾರಿ (973), ಹಾಸನ (1,800), ಕಲಬುರ್ಗಿ (988), ಮಂಡ್ಯ (1,133) ಮತ್ತು ಮೈಸೂರಿನಲ್ಲೂ (1,537) ಸೋಂಕು ತಗ್ಗಿದೆ. ಆದರೆ ತುಮಕೂರು (2,168), ದಕ್ಷಿಣ ಕನ್ನಡ (1,175) ಮತ್ತು ಧಾರವಾಡದಲ್ಲಿ (1,006) ತುಸು ಹೆಚ್ಚಿದೆ.

ADVERTISEMENT

ಬಾಗಲಕೋಟೆ (15), ಬಳ್ಳಾರಿ (26), ಹಾಸನ (22), ಹಾವೇರಿ (12), ಮಂಡ್ಯ (12), ಶಿವಮೊಗ್ಗ (11), ತುಮಕೂರು (15) ಹಾಗೂ ಉತ್ತರ ಕನ್ನಡದಲ್ಲಿ (11) ಹತ್ತಕ್ಕೂ ಅಧಿಕ ಮರಣ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು ಹಾಗೂ ರಾಮನಗರದಲ್ಲಿ ತಲಾ ಏಳು, ಧಾರವಾಡ ಹಾಗೂ ಕೋಲಾರದಲ್ಲಿ ತಲಾ ಎಂಟು ಹಾಗೂ ಕೊಡಗಿನಲ್ಲಿ ಒಂಬತ್ತು ಜನ ಕೋವಿಡ್‌ನಿಂದ ಸತ್ತಿದ್ದಾರೆ. ಮೃತರ ಪೈಕಿ ಬಹುತೇಕರು ಉಸಿರಾಟದ ತೊಂದರೆ ಅನುಭವಿಸಿದ್ದರು.

ಕೋವಿಡ್‌ ಪರೀಕ್ಷೆಗಳ ಸಂಖ್ಯೆ ಮತ್ತೆ ಇಳಿಕೆಯಾಗಿದೆ. 24 ಗಂಟೆಗಳಲ್ಲಿ 1.24 ಲಕ್ಷ ಮಂದಿಯ ಮಾದರಿಗಳನ್ನಷ್ಟೇ ಪರೀಕ್ಷಿಸಲಾಗಿದೆ. ಹೀಗಾಗಿ ಸೋಂಕು ದೃಢ ಪ್ರಮಾಣವು ಶೇ 31.66ಕ್ಕೆ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.