ADVERTISEMENT

ಕಾಸರಗೋಡು, ವಯನಾಡ್‌ಗೆ ತಲಾ 50 ಎಂಬಿಬಿಎಸ್‌ ಸೀಟು: ಜನರ ಕಣ್ಣಲ್ಲಿ ಹೊಸ ಭರವಸೆ

ಪಿಟಿಐ
Published 3 ಸೆಪ್ಟೆಂಬರ್ 2025, 14:34 IST
Last Updated 3 ಸೆಪ್ಟೆಂಬರ್ 2025, 14:34 IST
...
...   

ತಿರುವನಂತಪುರ: ರಾಷ್ಟ್ರೀಯ ವೈದ್ಯಕೀಯ ಆಯೋಗವು(ಎನ್‌ಎಂಸಿ) ಕಾಸರಗೋಡು ಮತ್ತು ವಯನಾಡ್‌ ಜಿಲ್ಲೆಗಳಿಗೆ ತಲಾ 50 ಎಂಬಿಬಿಎಸ್ ಸೀಟುಗಳನ್ನು ಮಂಜೂರುಗೊಳಿಸಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಹಿಂದುಳಿದಿರುವ ಉಭಯ ಜಿಲ್ಲೆಗಳ ಜನರಲ್ಲಿ ಹೊಸ ಭರವಸೆ ಮೂಡಿದೆ.

‘ವಯನಾಡ್‌ನಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸುವ ಕನಸು ನಿಜವಾಗುತ್ತಿರುವುದು ಖುಷಿ ನೀಡಿದೆ. ಲಕ್ಷಾಂತರ ಜನರ ಬೇಡಿಕೆ ಹಾಗೂ ರಾಹುಲ್ ಗಾಂಧಿ ಮತ್ತು ನಮ್ಮ ಪ್ರಯತ್ನ ಇಂದು ಫಲ ನೀಡಿದೆ’ ಎಂದು ವಯನಾಡ್‌ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಹೇಳಿದ್ದಾರೆ.

ವೈದ್ಯಕೀಯ ಕಾಲೇಜು ಶೀಘ್ರದಲ್ಲಿ ಕಾರ್ಯಾರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇರಳ ಸರ್ಕಾರವನ್ನು ಪ್ರಿಯಾಂಕಾ ಒತ್ತಾಯಿಸಿದ್ದಾರೆ.

ADVERTISEMENT

‘ಎನ್‌ಎಂಸಿ ನಿರ್ಧಾರ ಸ್ವಾಗತಾರ್ಹವಾದದ್ದು. ಆದರೆ ಜಿಲ್ಲೆಯಲ್ಲಿ ಜನರಿಗೆ ಸೂಕ್ತ ಚಿಕಿತ್ಸೆಗಳನ್ನು ನೀಡಲು ಬೇಕಾದ ಮೂಲಸೌಕರ್ಯಗಳ ಕೊರತೆಯಿದೆ’ ಎಂದು ವಯನಾಡ್‌ ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಸಂಶದ್‌ ಮರಕ್ಕರ್‌ ಅವರು ಹೇಳಿದ್ದಾರೆ.‌

‘ಎಂಬಿಬಿಎಸ್‌ ಸೀಟುಗಳನ್ನು ಮೀಸಲಿಟ್ಟಿರುವುದರಿಂದ, ಕಾಸರಗೋಡಿನಲ್ಲಿ ತಜ್ಞವೈದ್ಯರ ಸಂಖ್ಯೆ ಹೆಚ್ಚಾಗಬಹುದು. ಇದರೊಂದಿಗೆ ಸರ್ಕಾರ ಮೂಲಸೌಕರ್ಯಗಳನ್ನು ಒದಗಿಸಬೇಕು’ ಎಂದು ಎಂಡೋಸಲ್ಫಾನ್‌ ಸಂತ್ರಸ್ತರ ಸಮಿತಿಯ ನಾಯಕ ಅಂಬಲತಾರಾ ಕುನ್ಹಿಕೃಷ್ಣನ್  ಆಗ್ರಹಿಸಿದ್ದಾರೆ.

ತಜ್ಞವೈದ್ಯರ ಕೊರತೆಯಿಂದಾಗಿ ಕಾಸರಗೋಡಿನಲ್ಲಿರುವ ಎಂಡೋಸಲ್ಫಾನ್ ಪೀಡಿತರು ಸೇರಿದಂತೆ ಬಹುತೇಕರು ವೈದ್ಯಕೀಯ ಸೇವೆಗಳಿಗಾಗಿ ಮಂಗಳೂರಿಗೆ ತೆರಳಬೇಕಾದ ಅನಿವಾರ್ಯ ಇದೆ. ಅದೇ ರೀತಿ ವನ್ಯಜೀವಿ ಸಂಘರ್ಷ ಮತ್ತು ಪ್ರಾಕೃತಿಕ ವಿಕೋಪಗಳಿಗೆ ಪದೇ ಪದೇ ತುತ್ತಾಗುತ್ತಿರುವ ವಯನಾಡ್‌ನಲ್ಲಿಯೂ ವೈದ್ಯಕೀಯ ಮೂಲಸೌಕರ್ಯಗಳ ಕೊರತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.