ಕಥುವಾ ಮೇಘಸ್ಫೋಟ
ಪಿಟಿಐ ಚಿತ್ರ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಫೋಟ ಮತ್ತು ಭೂಕುಸಿತದಲ್ಲಿ ಆಗಿರುವ ಜೀವ ಹಾನಿ ಕುರಿತಂತೆ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ದುಃಖಿತ ಕುಟುಂಬಗಳಿಗೆ ಸಂತಾಪ ಸೂಚಿಸಿದ ಅಬ್ದುಲ್ಲಾ, ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸಿದರು. ಸಂತ್ರಸ್ತ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ಭರವಸೆ ನೀಡಿದ್ದಾರೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಸಂತ್ರಸ್ತರಿಗೆ ತಕ್ಷಣದ ಪರಿಹಾರವನ್ನು ಒದಗಿಸಲು, ಅಬ್ದುಲ್ಲಾ ರಾಜ್ಯ ವಿಪತ್ತು ಸ್ಪಂದನಾ ನಿಧಿಯಿಂದ ಹಣಕಾಸಿನ ನೆರವಿನ ಜೊತೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವನ್ನು ಘೋಷಿಸಿದ್ದಾರೆ.
ಮೃತರ ಸಂಬಂಧಿಕರಿಗೆ ತಲಾ ₹2 ಲಕ್ಷ ಮತ್ತು ತೀವ್ರವಾಗಿ ಗಾಯಗೊಂಡವರಿಗೆ ತಲಾ ₹1 ಲಕ್ಷ ಹಾಗೂ ಸಣ್ಣ ಪ್ರಮಾಣದ ಗಾಯಾಳುಗಳಿಗೆ ತಲಾ ₹50,000 ಪರಿಹಾರ ಘೋಷಿಸಿದ್ದಾರೆ.
ಕಥುವಾ ಜಿಲ್ಲೆಯ ರಾಜ್‌ಬಾಗ್‌ನ ಜೋಧ್ ಘಾಟಿ ಗ್ರಾಮ ಮತ್ತು ಜಂಗ್‌ಲೋಟ್‌ನ ಬಾಗ್ರಾ ಗ್ರಾಮಗಳಲ್ಲಿ ಮುಂಜಾನೆ ಸಂಭವಿಸಿದ ಮೇಘಸ್ಫೋಟ ಮತ್ತು ಭೂಕುಸಿತದಲ್ಲಿ ಏಳು ಜನರು ಸಾವಿಗೀಡಾಗಿದ್ದು, ಆರು ಜನರು ಗಾಯಗೊಂಡಿದ್ದಾರೆ.
ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ₹1 ಲಕ್ಷ, ತೀವ್ರ ಹಾನಿಗೊಳಗಾದ ಮನೆಗಳ ಮಾಲೀಕರಿಗೆ ₹50,000 ಹಾಗೂ ಭಾಗಶಃ ಹಾನಿಗೊಳಗಾದ ಮನೆಗಳಿಗೆ ₹25,000 ಪರಹಾರ ಘೋಷಿಸಿದ್ದಾರೆ.
ಶೀಘ್ರ ಪರಿಹಾರ, ರಕ್ಷಣೆ ಮತ್ತು ಸ್ಥಳಾಂತರ ಕಾರ್ಯ ಕೈಗೊಳ್ಳುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ದುಃಖದ ಸಂದರ್ಭದಲ್ಲಿ ಸರ್ಕಾರ ಜನರ ಜೊತೆಗಿರಲಿದೆ ಎಂದೂ ಹೇಳಿದ್ದಾರೆ.
ಈ ಸಂಬಂಧ ಸಿಎಂ ಓಮರ್ ಅಬ್ದುಲ್ಲಾಗೆ ಕರೆ ಮಾಡಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಗತ್ಯವಿರುವ ಎಲ್ಲ ನೆರವು ನೀಡುವ ಭರವಸೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.