ADVERTISEMENT

ಬಿಎಸ್ಆರ್‌ ಸಭೆಯಲ್ಲಿ ಎಎಪಿ, ಎಸ್‌ಪಿ, ಸಿಪಿಐ ನಾಯಕರು

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 13:10 IST
Last Updated 17 ಜನವರಿ 2023, 13:10 IST
ಬಿಆರ್‌ಎಸ್ ನಾಯಕ ಕೆಸಿಆರ್
ಬಿಆರ್‌ಎಸ್ ನಾಯಕ ಕೆಸಿಆರ್   

ಹೈದರಾಬಾದ್‌ (‍ಪಿಟಿಐ): ತೆಲಂಗಾಣದ ಆಡಳಿತಾರೂಢ ಬಿಆರ್‌ಎಸ್‌ ಪಕ್ಷವು ಖಮ್ಮಂ ಪಟ್ಟಣದಲ್ಲಿ ಬುಧವಾರ ಸಾರ್ವಜನಿಕ ಸಭೆ ಆಯೋಜಿಸಿದ್ದು, ಇದರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಮತ್ತು ಸಿಪಿಐ ನಾಯಕ ಡಿ.ರಾಜಾ ಅವರು ಪಾಲ್ಗೊಳ್ಳಲಿದ್ದಾರೆ.

ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ನೇತೃತ್ವದ ಪ್ರಾದೇಶಿಕ ಪಕ್ಷ ಟಿಆರ್‌ಎಸ್‌ ಅನ್ನು ರಾಷ್ಟ್ರೀಯ ಪಕ್ಷವಾಗಿ ‘ಬಿಆರ್‌ಎಸ್‌’ ಎಂದು ಮರುನಾಮಕರಣ ಮಾಡಿದ ನಂತರ ನಡೆಯುತ್ತಿರುವ ಮೊದಲ ಸಾರ್ವಜನಿಕ ಸಭೆ ಇದು. ವಿರೋಧ ಪಕ್ಷಗಳ ಪ್ರಮುಖ ನಾಯಕರು ಭಾಗಿಯಾಗುತ್ತಿದ್ದು, ದೇಶಕ್ಕೆ ಪರ್ಯಾಯ ರಾಜಕಾರಣದ ಹೊಸ ದಿಕ್ಕು ನೀಡುವ ಉದ್ದೇಶದ ಈ ಸಭೆ ಸಹಜವಾಗಿಯೇ ಮಹತ್ವ ಪಡೆದುಕೊಂಡಿದೆ.

ಇದೇ ವೇಳೆ ಪಕ್ಷದ ಅಧ್ಯಕ್ಷ ಕೆಸಿಆರ್‌ ಮತ್ತು ಸಭೆಗೆ ಆಗಮಿಸುತ್ತಿರುವ ನಾಯಕರು ಹೈದರಾಬಾದ್‌ ಬಳಿಯ ಯದಾದ್ರಿಯ ನವೀಕೃತ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ. ನಂತರ ತೆಲಂಗಾಣ ಸರ್ಕಾರ ಹಮ್ಮಿಕೊಂಡಿರುವ ಎರಡನೇ ಹಂತದ ನೇತ್ರ ತಪಾಸಣೆಯ ‘ಕಾಂತಿ ವೆಲುಗು’ ಕಾರ್ಯಕ್ರಮ ಉದ್ಘಾಟನೆಯಲ್ಲಿ ಭಾಗವಹಿಸುವರು ಎಂದು ಬಿಆರ್‌ಎಸ್‌ ನಾಯಕ ಬಿ.ವಿನೋದ್‌ ಕುಮಾರ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.