ನವದೆಹಲಿ: ದೆಹಲಿಯ ಮರಘಟ್ ವಾಲೆ ಬಾಬಾ ದೇವಸ್ಥಾನದ ಅರ್ಚಕರ ಹೆಸರನ್ನು ನೋಂದಾಯಿಸುವ ಮೂಲಕ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ‘ಪೂಜಾರಿ ಗ್ರಂಥಿ ಸಮ್ಮಾನ ಯೋಜನೆ’ಗೆ ಮಂಗಳವಾರ ಚಾಲನೆ ನೀಡಿದರು.
ದೆಹಲಿ ವಿಧಾನಸಭೆಗೆ ಫೆಬ್ರುವರಿಯಲ್ಲಿ ಚುನಾವಣೆ ನಡೆಯಲಿದೆ. ದೆಹಲಿಯಲ್ಲಿ ಎಎಪಿ ಅಧಿಕಾರಕ್ಕೆ ಮರಳಿದರೆ ಈ ಯೋಜನೆಯ ಅಡಿಯಲ್ಲಿ ಹಿಂದೂ ದೇವಸ್ಥಾನಗಳ ಅರ್ಚಕರಿಗೆ ಮತ್ತು ಗುರುದ್ವಾರಗಳ ಗ್ರಂಥಿಗಳಿಗೆ ತಿಂಗಳಿಗೆ ₹18 ಸಾವಿರ ಗೌರವಧನ ನೀಡಲಾಗುತ್ತದೆ ಎಂದು ಕೇಜ್ರಿವಾಲ್ ಪ್ರಕಟಿಸಿದ್ದರು.
‘ನಾನು ಇವತ್ತು ಮರಘಟ್ ಬಾಬಾ ದೇವಸ್ಥಾನಕ್ಕೆ ತೆರಳಿ ಯೋಜನೆಗೆ ಚಾಲನೆ ನೀಡಿದೆ’ ಎಂದು ಕೇಜ್ರಿವಾಲ್ ಅವರು ‘ಎಕ್ಸ್’ ಮೂಲಕ ತಿಳಿಸಿದ್ದಾರೆ. ನೋಂದಣಿ ಪ್ರಕ್ರಿಯೆಯನ್ನು ನಿಲ್ಲಿಸಲು ಬಿಜೆಪಿ ಎಲ್ಲ ಪ್ರಯತ್ನ ನಡೆಸಿತು. ಆದರೆ ಭಕ್ತನು ದೇವರನ್ನು ಭೇಟಿಯಾಗುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಅರ್ಚಕರಿಂದ ಪ್ರತಿಭಟನೆ:
ಸರ್ಕಾರಿ ಯೋಜನೆಗಳ ಅಡಿಯಲ್ಲಿ 10 ವರ್ಷಗಳಿಂದ ಏಕೆ ಯಾವುದೇ ಬಗೆಯ ಹಣಕಾಸಿನ ನೆರವು ಒದಗಿಸಲಿಲ್ಲ ಎಂಬುದನ್ನು ಕೇಜ್ರಿವಾಲ್ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿ ‘ಪ್ರಾಚೀನ ಹನುಮಾನ್ ಮಂದಿರ’ದ ಹೊರಗಡೆ ಅರ್ಚಕರ ಗುಂಪೊಂದು ಧರಣಿ ನಡೆಸಿತು.
‘ಪೂಜಾರಿ ಗ್ರಂಥಿ ಸಮ್ಮಾನ ಯೋಜನೆ’ಯನ್ನು ಟೀಕಿಸಿರುವ ಬಿಜೆಪಿ ನಾಯಕ ವಿಜಯ್ ಗೋಯಲ್ ಅವರು, ಈ ಘೋಷಣೆಯು ಚುನಾವಣಾ ಭರವಸೆಯಷ್ಟೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.