ADVERTISEMENT

ಚಿನ್ನ ಕಳ್ಳಸಾಗಣೆ ಪ್ರಕರಣ: ಪಿಣರಾಯಿ ಮಾಜಿ ಮುಖ್ಯ ಕಾರ್ಯದರ್ಶಿ ಆಸ್ಪತ್ರೆಗೆ ದಾಖಲು

ಏಜೆನ್ಸೀಸ್
Published 17 ಅಕ್ಟೋಬರ್ 2020, 16:29 IST
Last Updated 17 ಅಕ್ಟೋಬರ್ 2020, 16:29 IST
ಎಂ.ಶಿವಶಂಕರ್ ಇತ್ತೀಚೆಗೆ ಎನ್‌ಐಎ ಕಚೇರಿಗೆ ವಿಚಾರಣೆಗೆ ಬಂದ ಸಂದರ್ಭದ ಚಿತ್ರ – ಸಂಗ್ರಹ ಚಿತ್ರ
ಎಂ.ಶಿವಶಂಕರ್ ಇತ್ತೀಚೆಗೆ ಎನ್‌ಐಎ ಕಚೇರಿಗೆ ವಿಚಾರಣೆಗೆ ಬಂದ ಸಂದರ್ಭದ ಚಿತ್ರ – ಸಂಗ್ರಹ ಚಿತ್ರ   

ತಿರುವನಂತಪುರ: ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪ ಎದುರಿಸುತ್ತಿರುವ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ಮುಖ್ಯ ಕಾರ್ಯದರ್ಶಿ ಎಂ.ಶಿವಶಂಕರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ಅವರನ್ನು ತಿರುವನಂತಪುರದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಶನಿವಾರ ದಾಖಲಿಸಲಾಗಿದೆ.

ಸದ್ಯ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಸ್ಟಮ್ಸ್‌ ಅಧಿಕಾರಿಗಳು ಸಹ ಆಸ್ಪತ್ರೆಯಲ್ಲಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ವಿಚಾರಣೆಗೆ ಸಮನ್ಸ್ ಪಡೆದಿರುವ ಅವರನ್ನು ಅನಾರೋಗ್ಯದಿಂದಾಗಿ ಶುಕ್ರವಾರ ಸಂಜೆ ಪಿಆರ್‌ಎಸ್‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅಲ್ಲಿಂದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.

‘ಶಿವಶಂಕರ್ (57) ಅವರನ್ನು ಅಸೌಖ್ಯ, ಬೆನ್ನು ನೋವು ಹಾಗೂ ತಲೆಸುತ್ತುವಿಕೆ ಕಾರಣ ಅಕ್ಟೋಬರ್ 16ರಂದು ಸಂಜೆ 6 ಗಂಟೆಗೆ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಕರೆತರುವ ವೇಳೆ ಅವರ ರಕ್ತದೊತ್ತಡ ಅತಿಯಾಗಿತ್ತು. ಇಸಿಜಿಯಲ್ಲಿ ಸಣ್ಣ ವ್ಯತ್ಯಾಸ ಕಂಡುಬಂದಿತ್ತು. ಅವರನ್ನು ಹೃದಯ ಚಿಕಿತ್ಸಾ ವಿಭಾಗದ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು’ ಎಂದು ಪಿಆರ್‌ಎಸ್‌ ಖಾಸಗಿ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಅಕ್ಟೋಬರ್ 23ರ ವರೆಗೂ ಶಿವಶಂಕರ್ ಅವರನ್ನು ಬಂಧಿಸಬಾರದು ಎಂದು ಜಾರಿ ನಿರ್ದೇಶನಾಲಯಕ್ಕೆ ಕೇರಳ ಹೈಕೋರ್ಟ್‌ ಗುರುವಾರ ನಿರ್ದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.