
ತಿರುವನಂತಪುರ: ಕೇರಳದ ಎಲ್ಲಾ ಸರ್ಕಾರಿ ನೌಕರರ ಮೊಬೈಲ್ ಸಂಖ್ಯೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ವೈಯಕ್ತಿಕ ಸಂದೇಶ ರವಾನೆಯಾಗಿದ್ದು, ಇದೀಗ ಸರ್ಕಾರಿ ನೌಕರರ ವೈಯಕ್ತಿಕ ದತ್ತಾಂಶ ಕಳವು ಆರೋಪಕ್ಕೆ ಕಾರಣವಾಗಿದೆ. ಜತೆಗೆ ವಿವಾದಕ್ಕೀಡಾಗಿದೆ.
ಎಲ್ಲಾ ಸರ್ಕಾರಿ ನೌಕರರ ಮೊಬೈಲ್ ಸಂಖ್ಯೆಗೆ ರವಾನೆಯಾಗಿರುವ ಸಂದೇಶದಲ್ಲಿ ಅವರವರ ಹೆಸರನ್ನು ಸಂಬೋಧಿಸುವ ಜತೆಗೆ ‘ ಬಾಕಿ ಉಳಿದಿದ್ದ ತುಟ್ಟಿ ಭತ್ಯೆಯನ್ನು ಸರ್ಕಾರಿ ನೌಕರರಿಗೆ ವಿತರಿಸಲಾಗಿದ್ದು, ಈ ಮೂಲಕ ಸರ್ಕಾರ ತಾನು ನೀಡಿದ್ದ ಭರವಸೆಯನ್ನು ಈಡೇರಿಸಿದೆ’ ಎಂದು ಉಲ್ಲೇಖಿಸಲಾಗಿದೆ.
ಸರ್ಕಾರವು ತನ್ನ ರಾಜಕೀಯ ಪ್ರಚಾರಕ್ಕಾಗಿ ನೌಕಕರ ವೈಯಕ್ತಿಕ ದತ್ತಾಂಶವನ್ನು ಅಕ್ರಮವಾಗಿ ಬಳಸಿಕೊಂಡಿದೆ ಎಂದು ಆರೋಪಿಸಿ ಕೇರಳ ಹೈಕೋರ್ಟ್‌ನಲ್ಲಿ ಕೆಲವು ಮಂದಿ ಅರ್ಜಿಯನ್ನೂ ಸಲ್ಲಿಸಿದ್ದಾರೆ. ನ್ಯಾಯಾಲಯವು ಮಂಗಳವಾರ ಈ ಅರ್ಜಿಗಳನ್ನು ಪರಿಗಣಿಸುವ ಸಾಧ್ಯತೆ ಇದೆ.
ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿರುವಾಗಲೇ ನಡೆದಿರುವ ಈ ಬೆಳವಣಿಗೆ ರಾಜಕೀಯ ಚರ್ಚೆಗೂ ಗ್ರಾಸವಾಗಿದೆ. ‘ಚುನಾವಣಾ ಉದ್ದೇಶಕ್ಕಾಗಿ ಸರ್ಕಾರಿ ನೌಕಕರ ದತ್ತಾಂಶವನ್ನು ಕಳವು ಮಾಡುವ ಮೂಲಕ ಮುಖ್ಯಮಂತ್ರಿಗಳು ನೇರವಾಗಿ ಸಿಕ್ಕಿಬಿದ್ದಿದ್ದಾರೆ. ಇದು ವಿಶ್ವಾಸ ಮತ್ತು ಖಾಸಗಿತನದ ಉಲ್ಲಂಘನೆ’ ಎಂದು ಕಾಂಗ್ರೆಸ್ ಆರೋಪಿಸಿದೆ.
ಏತನ್ಮಧ್ಯೆ, ಸರ್ಕಾರಿ ನೌಕರರ ಹಾಗೂ ಪಿಂಚಣಿದಾರರ ವೇತನವನ್ನು ಪರಿಷ್ಕರಿಸಲು ನೂತನ ವೇತನ ಆಯೋಗವನ್ನು ರಾಜ್ಯ ಸರ್ಕಾರ ಸೋಮವಾರ ಘೋಷಿಸಿದೆ. ಮಾಜಿ ಮುಖ್ಯ ಕಾರ್ಯದರ್ಶಿ ವಿ.ಪಿ.ಜಾಯ್ ಅವರು ಆಯೋಗದ ನೇತೃತ್ವ ವಹಿಸಲಿದ್ದು, ಅವರಿಗೆ ಈ ಸಂಬಂಧಿಸಿದಂತೆ ಮೂರು ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆಯೂ ಸರ್ಕಾರ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.