ADVERTISEMENT

SIR ಮುಂದೂಡಲು ಆಗ್ರಹ: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಕೇರಳ ಸರ್ಕಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ನವೆಂಬರ್ 2025, 7:04 IST
Last Updated 18 ನವೆಂಬರ್ 2025, 7:04 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಮುಂದೂಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಡಿಸೆಂಬರ್‌ನಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಸ್‌ಐಆರ್ ಪ್ರಕ್ರಿಯೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರ್ಟ್‌ಗೆ ಕೇರಳ ಸರ್ಕಾರ ಮನವಿ ಮಾಡಿದೆ.

ನವೆಂಬರ್ 4ರಿಂದ ಡಿಸೆಂಬರ್ 4ರವರೆಗೆ ಎಸ್‌ಐಆರ್ ಪ್ರಕ್ರಿಯೆ ನಡೆಸುವುದು ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯೊಂದಿಗೆ ಹೊಂದಿಕೆಯಾಗುತ್ತದೆ. ಎರಡೂ ಪ್ರಕ್ರಿಯೆಗಳನ್ನು ಏಕಕಾಲದಲ್ಲಿ ನಡೆಸುವುದರಿಂದ ಮಾನವ ಸಂಪನ್ಮೂಲದ ಮೇಲೆ ಹೊರೆಯಾಗುವುದಲ್ಲದೆ, ಸರ್ಕಾರದ ದೈನಂದಿನ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳಲು ಸಿಬ್ಬಂದಿ ಕೊರತೆ ಉಂಟಾಗಿ ‘ಆಡಳಿತಾತ್ಮಕ ಬಿಕ್ಕಟ್ಟು’ ಎದುರಾಗುವ ಸಾಧ್ಯತೆ ಇದೆ ಎಂದು ಕೇರಳ ಸರ್ಕಾರ ವಿವರಿಸಿದೆ.

ADVERTISEMENT

ಎಸ್‌ಐಆರ್ ಪ್ರಕ್ರಿಯೆ ನಡೆಸಲು ಉದ್ದೇಶಿಸಿರುವ ದಿನಾಂಕಗಳು ಪ್ರಸ್ತುತ ಘೋಷಣೆಯಾಗಿರುವ ಚುನಾವಣಾ ವೇಳಾಪಟ್ಟಿಗೆ ಹೊಂದಿಕೆಯಾಗುವುದಿಲ್ಲ ಎಂದೂ ಕೇರಳ ಸರ್ಕಾರ ಉಲ್ಲೇಖಿಸಿದೆ.

ಕೇರಳದ ಸ್ಥಳೀಯ ಸಂಸ್ಥೆಗಳಿಗೆ ಡಿಸೆಂಬರ್ 9 ಮತ್ತು 11ರಂದು ಮತದಾನ ನಡೆಯಲಿದ್ದು, ಡಿ.13ರಂದು ಮತ ಎಣಿಕೆ ನಡೆಯಲಿದೆ. ಡಿ.18ರೊಳಗೆ ಸಂಪೂರ್ಣ ಚುನಾವಣಾ ಪ್ರಕ್ರಿಯೆಯು ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ 68,000 ಪೊಲೀಸ್ ಮತ್ತು ಇತರ ಭದ್ರತಾ ಸಿಬ್ಬಂದಿಯ ಜೊತೆಗೆ ಸರ್ಕಾರಿ ಹಾಗೂ ಅರೆ ಸರ್ಕಾರಿ ಸೇವೆಗಳಿಂದ 1.76 ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಎಸ್‌ಐಆರ್‌ಗೆ ಸುಮಾರು 25,668 ಹೆಚ್ಚುವರಿ ಸಿಬ್ಬಂದಿ ಅಗತ್ಯವಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಈಗಾಗಲೇ ಬಿಹಾರದಲ್ಲಿ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಇದೀಗ ಅಂಡಮಾನ್ ಮತ್ತು ನಿಕೋಬಾರ್, ಛತ್ತೀಸಗಢ, ಗೋವಾ, ಗುಜರಾತ್, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಎಸ್‌ಐಆರ್ ಅನ್ನು ಚುನಾವಣಾ ಆಯೋಗ ಆರಂಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.